From the earlier FilmySphere, kept as published on 2014-12-13. It has not been updated.
Review of Naanu Hemanth Avalu Sevanthi
FilmySphere critic
ನಾನು ಹೇಮಂತ್ ಅವಳು ಸೇವಂತಿ ಕಂಡವನ ಸ್ಥಿತಿ; ದೇವರೇ ಗತಿ!
ಸದಭಿರುಚಿಯ ಚಿತ್ರ ತಮ್ಮದೆಂಬ ಬಗ್ಗೆ ಬಹಳಷ್ಟು ಭರವಸೆಗಳನ್ನು ನೀಡಿದ್ದ ನಿರ್ದೇಶಕ ಸುಧಾಕರ ಬನ್ನಂಜೆ ನೀಡಿರುವ ಒಂದು ಮಸಾಲ ರಂಜನೆಯ ತೀರಾ ಸಾಧಾರಣ ಚಿತ್ರವೇ ನಾನು ಹೇಮಂತ್ ಅವಳು ಸೇವಂತಿ.
ಚಿತ್ರದಲ್ಲಿ ಕತೆಯೆಂದು ಹೇಳಲು ಯಾವುದೇ ಗಟ್ಟಿ ವಸ್ತುವಿಲ್ಲ. ಒನ್ ಲೈನಾಗಿ ಹೇಳುವುದಾದರೆ ಆದರ್ಶ ಪ್ರೇಮದ ಕನಸುಕಂಡ ಯುವಕನೋರ್ವ ತನ್ನ ಕಚೇರಿಗೆ ಹೊಸದಾಗಿ ಬರುವ ಮೇಲಧಿಕಾರಿಣಿಯನ್ನು ಪ್ರೀತಿಸುತ್ತಾನೆ. ಆದರೆ ಚಿತ್ರದ ಕೊನೆಯ ತನಕವೂ ಏಕಮುಖವಾಗಿ ಪ್ರೀತಿಸುವ ಆತ ಕೊನೆಯಲ್ಲಿ ಅದನ್ನು ಆಕೆಗೆ ತಿಳಿಸಲು ಮುಂದಾಗುತ್ತಾನೆ. ಇನ್ನೇನು ಹೇಳಬೇಕೆಂದುಕೊಂಡಾಗ ಆಕೆಬೇರೊಬ್ಬನನ್ನು ಪ್ರೀತಿಸುತ್ತಿದ್ದಳೆಂಬ ಸಾಕ್ಷ್ಯ ಸಿಗುತ್ತದೆ. ಆದರೆ ಅದು ನಿಜವೇ ಎಂಬ ಪ್ರಶ್ನೆಗೆ ಎಲ್ಲರಿಗೂ ಮೊದಲೇ ಹೊಳೆಯಬಲ್ಲ ಸಾಮಾನ್ಯ ಉತ್ತರವೇ ಕ್ಲೈಮ್ಯಾಕ್ಸ್ ನಲ್ಲಿದೆ. ಹೊಸ ಕಲಾವಿದರ ತಂಡ ಚಿತ್ರದ ಆಕರ್ಷಣೆಯೇನೋ ಹೌದು. ಆದರೆ ಕ್ಯಾಮರಾ ಸ್ಟ್ಯಾಂಡ್ ಹಾಕಿ ಒಂದೇ ಫ್ರೇಮ್ ನಲ್ಲಿ ಚಿತ್ರೀಕರಣ ನಡೆಸಿದಂತೆ ಕಾಣಿಸುವ ದೃಶ್ಯದಲ್ಲಿ ನಾಲ್ಕೈದು ಯುವಕರ ಸ್ಟ್ಯಾಂಡರ್ಡ್ ಇಲ್ಲದ ಸ್ಟ್ಯಾಂಡಿಂಗ್ ಕಾಮಿಡಿ ಯಾವುದೋ ಕಳಪೆ ಹಾಸ್ಯ ಧಾರಾವಾಹಿಯನ್ನು ನೆನಪಿಸುತ್ತದೆ. ಅವರಲ್ಲಿ ನಾಯಕ ರಜನೀಶ್ ಕೂಡ ಸೇರಿರುವುದು ವಿಪರ್ಯಾಸ. ಆತನ ನಗು ಮತ್ತು ಸೌಂದರ್ಯ ಇತರರಿಗಿಂತ ಉತ್ತಮನೆಂದು ತೋರಿಸಿಕೊಟ್ಟರೂ ಆತನಿಂದ ಗೊಂಬೆ ಮಾದರಿಯಲ್ಲಿ ಕಣ್ಣರಳಿಸಿಕೊಂಡು ಸಂಭಾಷಣೆ ಹೇಳಿಸಿರುವ ರೀತಿ ನಿರ್ದೇಶಕರಿಗೇ ಪ್ರೀತಿ. ಚಿತ್ರವಿಡೀ ನಾಯಕಿಯನ್ನು ತನ್ನ ಬಳಿಯಲ್ಲಿದ್ದುಕೊಂಡಂತೆ ಅಂದುಕೊಂಡು ಡ್ರೀಮ್ ಸಾಂಗ್ ಮುಗಿದ ಬಳಿಕ ಭುಜವೆಗರಿಸಿ ಬೆಚ್ಚಿ ಬೀಳುವ ಆತನನ್ನು ಕಂಡು ಪ್ರೇಕ್ಷಕ ಸುಸ್ತಾಗುತ್ತಾನೆ. ಮತ್ತೋರ್ವ ನಾಯಕ ವಿಜೇಶ್ ಫೈಟ್ ಸೀನ್ ಒಂದರಲ್ಲಿ ತಮ್ಮ ದೇಹಧಾರ್ಡ್ಯೆತೆ ಪ್ರದರ್ಶಿಸಿದ್ದಾರೆ. ಹೊಸಬರ ತಂಡದಲ್ಲಿ ನಾಯಕಿ ಲೇಖಾಚಂದ್ರ ತಮ್ಮ ನಟನೆ ಮತ್ತು ಗ್ಲಾಮರ್ ನಿಂದ ಭರವಸೆ ಮೂಡಿಸುವುದು ಸುಳ್ಳಲ್ಲ. ಅದೇ ರೀತಿ ಮಲ್ನಾಡ್ ಮಂಜು ನಗಿಸುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ನಾಯಕನ ಮಿತ್ರರಾಗಲೀ, ಕಚೇರಿಯಲ್ಲಿರುವವರಾಗಲೀ ಪ್ರೇಮಕಾಮದಾಟದಲ್ಲೇ ಚಿತ್ರವನ್ನು ತುಂಬಿದ್ದಾರೆ. ಕಾಶೀನಾಥರ ಎಂಬತ್ತರ ದಶಕದ ಚಿತ್ರಗಳ ಬಗ್ಗೆ ತಾವು ಬರೆದ ಸಂಭಾಷಣೆಯಲ್ಲಿ ಉಲ್ಲೇಖಿಸಿರುವ ನಿರ್ದೇಶಕರು ತಮ್ಮ 25 ವರ್ಷಗಳ ಸಿನೆಮಾ ಅನುಭವದಲ್ಲಿ ಇನ್ನೂ ಅಷ್ಟೇ ಹಿಂದೆ ಉಳಿದಿರುವುದನ್ನು ಇಲ್ಲಿ ಸಾಬೀತು ಪಡಿಸಿದ್ದಾರೆ! ಕಿರುತೆರೆ ಸ್ಟಾರ್ ವಿಜಯ ಸೂರ್ಯನ ಗೆಸ್ಟ್ ಅಪಿಯರೆನ್ಸ್ ಗೀತೆಯನ್ನು ಬಿಟ್ಟರೆ ನಿಜಕ್ಕೂ ಮನೆಮಂದಿ ಕುಳಿತು ಸಂಭ್ರಮಿಸುವಂಥ ದೃಶ್ಯಗಳು ಚಿತ್ರದಲ್ಲಿಲ್ಲವೆನ್ನಬಹುದು. ಸಾಧು ಕೋಕಿಲಾರ ವೇಣುಗೋಪಾಲ ಕೃಷ್ಣ ಸ್ವಾಮಿಯಂತೂ ವಯಸ್ಕರ ಚಿತ್ರಗಳಲ್ಲಿನ ಮಾದರಿಯ ಪಾತ್ರದಂತೆ ವರ್ತಿಸುವುದು ದುರಂತ. ಒಟ್ಟಿನಲ್ಲಿ ಚಿತ್ರದ ಆಯ್ಕೆ ಪ್ರೇಕ್ಷಕರಿಗೆ ಬಿಟ್ಟಿದ್ದು.