From the earlier FilmySphere, kept as published on 2015-09-05. It has not been updated.
Review of Rx Suri
FilmySphere critic · Rating 2/5
ಆರ್ ಎಕ್ಸ್ ಸೂರಿ ಚಿತ್ರ ವಿಮರ್ಶೆ ಎಕ್ಸ್ ಟ್ರಾ ಎಕ್ಸ್ ಗಳ ಹಾವಳಿ.
ದುನಿಯಾ ವಿಜಯ್ ಸಿನೆಮಾ ಒಂದು ಸಣ್ಣ ಗ್ಯಾಪ್ ನ ನಂತರ ತೆರೆ ಕಾಣುತ್ತಿರುವುದರಿಂದಾಗಿ ಆರೆಕ್ಸ್ ಸೂರಿ ಬಗ್ಗೆ ವಿಶೇಷ ನಿರೀಕ್ಷೆಯಿತ್ತು. ಆಂಧ್ರದ ಭೂಗತ ಪಾತಕಿ ಪೆರಟಾಲ ಸೂರಿ ಕತೆಯೆಂದು ಬಿಂಬಿತವಾಗಿದ್ದ ಚಿತ್ರ ಸೂತಕ ಜಾತಕದೊಂದೊಗೆ ನಿರಾಶೆ ಮೂಡಿಸಿದೆ.ನಿರ್ದೇಶಕ ಶ್ರೀಜಯ್ ಚಿತ್ರವನ್ನು ತೆಲುಗು ಮಂದಿಗೆಂದೇ ಮಾಡಿದ್ದಾರೇನೋ ಎಂಬ ಸಂದೇಹ ಬರದೇ ಇರದು.
ಚಿತ್ರದಲ್ಲಿ ನಾಯಕನ ಕೆಲಸವೇ ರೌಡಿಸಂ. ಆದರೆ ಅದು ಶುರುವಾಗುವುದಕ್ಕೂ ಒಂದು ಕಾರಣವಿದೆ. ತಂಗಿಯ ಮೊಬೈಲ್ ಫೋನ್ ಗೆ ಅಶ್ಲೀಲ ಚಿತ್ರಗಳನ್ನು ಕಳಿಸಿದಾತನನ್ನು ಮತ್ತು ಆತನ ಅಂಗಡಿಯನ್ನು ಹೊಡೆದುರುಳಿಸುತ್ತಾನೆ ಸೂರಿ. ಆಗ ಆತನ ವಿರುದ್ಧ ದಂಡೆತ್ತಿ ಬರುವ ರೌಡಿ ಪಡೆಯ ನಾಯಕನನ್ನು ಒಂದೇ ಏಟಿಗೆ ಕೊಚ್ಚಿ ಹಾಕುತ್ತಾನೆ. ಹಾಗೆ ಜೈಲು ಸೇರಿದವನು ಮರಳಿ ಬಂದ ಮೇಲೆ ಮೊದಲು ಅನಿವಾರ್ಯವಾಗಿ, ಸ್ವರಕ್ಷಣೆಗಾಗಿ ಬಳಿಕ ಸೇವೆಯ ಹೆಸರಲ್ಲಿ ಮಚ್ಚಿನಲ್ಲೇ ಮಾತನಾಡತೊಡಗುತ್ತಾನೆ. ಹಾಗೆ ಮಚ್ಚು ಹಿಡಿದವನ ಕತೆ ಏನಾಗಬೇಕು ಎಂಬುದನ್ನು ಚಿತ್ರ ಹೇಳುತ್ತದೆ.
ರಾಜಧಾನಿ ಚಿತ್ರದ ಬಳಿಕ ಕುಟುಂಬದ ಕಾಳಜಿ ಮತ್ತು ಹುಡುಗರ ರೌಡಿಸಂ ಮತ್ತು ನವಿರಾದ ಪ್ರೇಮ ಇವೆಲ್ಲವನ್ನೂ ಮತ್ತೊಮ್ಮೆ ಪರದೆಯ ಮೇಲೆ ತೋರಿಸಿರುವ ಚಿತ್ರವಿದು. ಆದರೆ ಕನಿಷ್ಠ ಆ ಮಟ್ಟಿನ ಶ್ರೇಷ್ಠತೆಯೂ ಚಿತ್ರದಲ್ಲಿಲ್ಲ ಎಂಬುದು ವಾಸ್ತವ. ನಾಯಕ ವಿಜಯ್ ಗೆ ನಟನೆಗಿಂತ ಹೊಡೆದಾಟದ ದೃಶ್ಯಗಳೇ ಅಧಿಕ. ಅದರಲ್ಲೂ ನಟನೆ ಬಿಟ್ಟು ನೈಜತೆಗೆ ಯತ್ನಿಸಿರುವುದು ಮತ್ತು ರಕ್ತ ಬರಿಸಿ, ರಕ್ತ ತರಿಸುವ ದೃಶ್ಯಗಳ ನಡುವೆ ಪ್ರೇಕ್ಷಕ ತತ್ತರಿಸುವಂತಾಗಿದೆ. ಚಿತ್ರದಲ್ಲಿ ಮತ್ತೊಂದು ದೊಡ್ಡ ಕೆಡುಕಾಗಿ ಕಾಡಿರುವುದು ದ್ವಂದ್ವಾರ್ಥದ ಸಂಭಾಷಣೆಗಳು. ಬುಲೆಟ್ ಪ್ರಕಾಶ್; ಆತನ ಪತ್ನಿಯ ಪಾತ್ರ ನಿರ್ವಹಿಸಿದಾಕೆ ಜೊತೆಗೆ ಸಾಧು ಕೋಕಿಲ ಮತ್ತು ಅವರೊಂದಿಗೆ ಸೇರಿಕೊಂಡಾಗ ಖಳನಟ ರವಿಶಂಕರ್ ಬಾಯಲ್ಲೂ ಅಶ್ಲೀಲ ಸಂಭಾಷಣೆಗಳು ತಾಂಡವವಾಡಿವೆ. ಕತೆಗೆ ಸಂಬಂಧವಿಲ್ಲದ ಈ ದೃಶ್ಯಗಳು ಹಲವೆಡೆ ನುಸುಳಿ ಬಂದುಅಸಹ್ಯ ಹುಟ್ಟಿಸುತ್ತದೆ. ನಾಯಕಿಯಾಗಿ ನವನಟಿ ಆಕಾಂಕ್ಷ ಭರವಸೆಯ ನಟನೆ ನೀಡಿದ್ದಾರೆ. ಆಕೆಯ ತಾಯಿಯಾಗಿ ತುಳಸಿ ಶಿವಮಣಿ ಮಾತೆತ್ತಿದರೆ ಅಳುತ್ತಾರೆ. ನಾಯಕನ ತಂದೆಯಾಗಿ ಅವಿನಾಶ್, ತಾಯಿಯಾಗಿ ವಿನಯಾ ಪ್ರಸಾದ್ ನಟಿಸಿದ್ದಾರೆ. ಮಧ್ಯಂತರದ ಬಳಿಕ ಅನಿರೀಕ್ಷಿತವಾಗಿ ಆರಂಭಗೊಳ್ಳುವ ಫ್ಲ್ಯಾಶ್ ಬ್ಯಾಕ್ ಮತ್ತು ಅಡ್ಡಾದಿಡ್ಡಿ ಚಿತ್ರಕತೆ ಚಿತ್ರವನ್ನು ಗೋಜಲುಗೊಳಿಸಿದೆ. ಚಿತ್ರದಲ್ಲಿ ಕನ್ನಡದ ಹಲವು ಹಿಟ್ ಹಾಡುಗಳ ಪಲ್ಲವಿಯನ್ನು ಬಳಸಿರುವುದರ ಜೊತೆಗೆ 'ಅನಾಥ ಮಗುವಾದೆ' ಹಾಡನ್ನು ಪೂರ್ತಿಯಾಗಿ ಕೇಳಿಸಿದ್ದಾರೆ! ರವಿಶಂಕರ್ ಸೇರಿದಂತೆ ಒಂದಷ್ಟು ಪೋಷಕ ನಟರ ನೈಜ ನಟನೆ, ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತವನ್ನು ಹೊರತು ಪಡಿಸಿದರೆ ಚಿತ್ರದಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲ. ಇದೆಯೆಂಬ ನಿರೀಕ್ಷೆಯಿಟ್ಟುಕೊಂಡವರು ಖಂಡಿತಾ ನೋಡಿ 'ಅನುಭವಿಸಬೇಕಾದ' ಚಿತ್ರವಿದು.