Skip to content

hello@filmysphere.com+91 99868 150022

FilmySphere

From the earlier FilmySphere, kept as published on 2014-12-25. It has not been updated.

Review of Jyothi Alias Kothiraj

FilmySphere critic

ಜೋತಿರಾಜ್ ಅಲಿಯಾಸ್ ಕೋತಿರಾಜ್

ಕೋತಿರಾಜ್ ಸಫಲ; ಜೋಗಿರಾಜ್ ವಿಫಲ!

'ನಾನು ಕಪ್ಪಗಿದ್ದೀನಿ; ನನ್ನ ಮುಖದಲ್ಲಿ ಬೆಳ್ಳಗಿರೋದು ಹಲ್ಲು ಬಿಟ್ರೆ ಬೇರೇನೂ ಇಲ್ಲ!' ಇದು ಚಿತ್ರದಲ್ಲಿ ತನ್ನನ್ನು ಪ್ರೀತಿಸುವ ಹುಡುಗಿಯಲ್ಲಿ ಜೋತಿರಾಜ್ ಹೇಳುವ ಮಾತು. ಇದು ವಾಸ್ತವವೇ ಆದರೂ ಇಲ್ಲಿ ಇಬ್ಬಿಬ್ಬರು ನಾಯಕಿಯರು ಆತನನ್ನು ಪ್ರೀತಿಸುತ್ತಾರೆ. ಅದೇಕೆ ಹಾಗೆ ಎಂಬುದನ್ನು ಚಿತ್ರದಲ್ಲಿ ಹೇಳಲೆತ್ನಿಸಲಾಗಿದೆ.

ಜೋತಿರಾಜ್ ಕಪ್ಪಗಿರೋದು ನಿಜವೇ. ಆದರೆ ಆತನ ಮನಸ್ಸಲ್ಲಿ ಕಪ್ಪಿಲ್ಲ. ಚಿತ್ರದಲ್ಲಿ ಆತ ಮನೆಯಿಂದ ಓಡಿ ಹೋಗಿ ವೇಶ್ಯೆಯೊಬ್ಬಳ ಕಾರಿಗೆ ಸಿಕ್ಕಿ ಆಕೆಯ ಪೋಷಣೆಯಲ್ಲಿ ಬೆಳೆಯುವ ಹುಡುಗ. ಆದರೆ ಬೆಳೆದ ಮೇಲೆ ಆಕೆಯಿಂದ ಬೇರಾಗುತ್ತಾನೆ. ಕಮಲಿ ಎಂಬ ಹುಡುಗಿಗೆ ಅಪಾಯದಿಂದ ರಕ್ಷಣೆಯಾಗುತ್ತಾನೆ. ಆಕೆ ಆತನನ್ನು ತನ್ನ ಹಳ್ಳಿಯ ಮನೆಗೆ ಕರೆದುಕೊಂಡು ಬರುತ್ತಾಳೆ. ಅಲ್ಲಿ ಆತ ಮನೆಮಗನಂತೆ ಬೆಳೆಯಲೆಂದು ಆಕೆಯ ತಂದೆ ಹೇಳಿದಾಗ ಒಪ್ಪುತ್ತಾನೆ. ಆದರೆ ಆತನನ್ನು ತನ್ನ ಮಗಳು ಪ್ರೀತಿಸುತ್ತಾಳೆಂದು ಅರಿತಾಗ ಎಲ್ಲಾದರೂ ಹೋಗಿ ಸಾಯೆಂದು ಹೇಳಿ ಜೋತಿರಾಜನನ್ನು ಮನೆಯಿಂದ ಹೊರದಬ್ಬುತ್ತಾನೆ. ಸಾಯಲೆಂದು ದುರ್ಗದ ಕೋಟೆ ಹತ್ತಿ ಧುಮುಕಲೆತ್ನಿಸುವ ಆತನನ್ನು ಅಲ್ಲಿಂದ ಕರೆತಂದು ಬರಿಗೈಯ ಉತ್ತಮ ಚಾರಣಿಗನಾಗಿ ಪ್ರಚಾರಕ್ಕೆ ತರುತ್ತಾಳೆ ಮತ್ತೊಬ್ಬ ಹುಡುಗಿ. ಟೀವಿ ಆ್ಯಂಕರಾದ ಆಕೆ ತನ್ನನ್ನು ಪ್ರೀತಿಸುತ್ತಿದ್ದಾಳೆಂದು ಅರಿವಾದಾಗ ಆಕೆಯನ್ನೂ ಬಿಟ್ಟು ದೂರ ಸಾಗುತ್ತಾನೆ ಜೋತಿರಾಜ್. ಆದರೆ ಇತ್ತ ಕಡೆ ಕಮಲಿ ಆತನನ್ನೇ ಬಯಸಿ ಹುಡುಕಾಡುತ್ತಾಳೆ. ಆಕೆಗೆ ತಂದೆ ನೋಡಿದ್ದ ವರ ಖಳನಂತೆ ಕಾಡುತ್ತಾನೆ. ಜೋಗದ ಗುಂಡಿಯಿಂದ ಪ್ರೇಮಿಗಳ ಹೆಣ ತೆಗೆಯಲೆಂದು ಜೋತಿರಾಜ್ ಗೆ ಅನಾಮಧೇಯ ಕರೆ ಮಾಡಿ ಕೊಲೆ ಮಾಡಲೆಂದು ಕರೆಸುತ್ತಾನೆ. ತಮ್ಮ ಪುತ್ರ ಎಂದೋ ತೀರಿಕೊಂಡಿದ್ದಾನೆಂದುಕೊಂಡಿದ್ದ ಜೋತಿರಾಜ್ ನ ತಂದೆ ತಾಯಿ ಟೀವಿಯಲ್ಲಿ ಆತನನ್ನು ಕಂಡು ಹುಡುಕಾಟ ಶುರುಮಾಡುತ್ತಾರೆ. ಅವರಿಗೆ ಟೀವಿ ವರದಿಗಾರ್ತಿ ಸಾಥ್ ನೀಡುತ್ತಾಳೆ. ಕ್ಲೈಮ್ಯಾಕ್ಸ್ ನಲ್ಲಿ ಜೋತಿರಾಜ್ ಇಬ್ಬರು ನಾಯಕಿಯರನ್ನೂ ಸೇರುವುದಿಲ್ಲ. ಹಾಗಾದರೆ ಜೋಗದಲ್ಲಿ ಯಾರ್ಯಾರ ಸಾವಾಗುತ್ತದೆ? ತಂದೆ ತಾಯಿಗೆ ಕೊನೆಗಾದರೂ ಜೋತಿರಾಜ್ ಸಿಗುತ್ತಾನ ಎಂಬುದನ್ನು ತಿಳಿಯಬೇಕಾದರೆ ನೀವು ಚಿತ್ರಮಂದಿರಕ್ಕೆ ಹೋಗಲೇಬೇಕು.

ಚಿತ್ರದ ಹೈಲೈಟ್ ಆಗಿರುವಂಥ ಜೋತಿರಾಜ್ ನ ಹಗ್ಗವಿಲ್ಲದೆ ಕೋಟೆ, ಕಟ್ಟಡಗಳನ್ನೇರುವ ನೈಜ ಸಾಹಸ ಆರಂಭದಿಂದಲೇ ಶುರುವಾಗಿ ಕ್ಲೈಮ್ಯಾಕ್ಸ್ ನಲ್ಲಿ ಕಳೆಗಟ್ಟುತ್ತದೆ. ಆತನ ಸಾಹಸಕ್ಕೆ ಎರಡು ಮಾತಿಲ್ಲವಾದರೂ ಇಂಟ್ರಡಕ್ಷನಲ್ಲೇ ಆತನನ್ನು ಮಾನಸಿಕವಾಗಿ ನೊಂದಂತೆ ತೋರಿಸಲಾಗುತ್ತದೆ. ಮುಖದಲ್ಲಿ ತುಂಟು ಅಲಕ್ಷ್ಯದ ನಗುವೊಂದನ್ನು ಬಿಟ್ಟರೆ ಬೇರೇನನ್ನೂ ವ್ಯಕ್ತಪಡಿಸಲಾಗದ ಜೋತಿರಾಜ್ ಗೆ ಅಂಥ ಸನ್ನಿವೇಶವನ್ನು ನೀಡಿರುವುದು ನಿಜಕ್ಕೂ ನಿರ್ದೇಶಕರೇ ಮಾಡಿರುವ ಸಾಹಸವೆನ್ನಬಹುದು. ನಾಯಕನ ಸ್ಪಷ್ಟವಿಲ್ಲದ ಕನ್ನಡವೂ ಕೂಡ ಆತನ ಸಂಭಾಷಣೆಯನ್ನು ಪರಿಣಾಮಕಾರಿಯಾಗಿಸುವಲ್ಲಿ ವಿಫಲವಾಗಿದೆ. ಕ್ಲೈಮ್ಯಾಕ್ಸ್ ನಲ್ಲಿಯೂ ಜೋಗಿ ಚಿತ್ರವನ್ನು ನೆನಪಿಸುವಂಥ ತಾಯಿ (ಮತ್ತು ತಂದೆಯ) ಮಗನ ಸೆಂಟಿಮೆಂಟ್ ದೃಶ್ಯವನ್ನು ಕತೆಗಾಗಿ ತುರುಕಿರುವುದು ಗೋಚರವಾಗುತ್ತದೆ. ಚಿತ್ರದ ಕೊನೆಯಲ್ಲಿ ಮತ್ತೆ ಶಂಕರ್ ಪ್ರಕಾಶ್ ರ ಹಿನ್ನೆಲೆ ದನಿಯಲ್ಲಿ ಜೋತಿರಾಜ್ ಬಗ್ಗೆ ಹೇಳಲಾಗುವ ಮಾತುಗಳು ಎಲ್ಲೋ ಒಂದು ಡಾಕ್ಯುಮೆಂಟರಿ ಪೂರ್ತಿಯಾದ ಅನುಭವ ನೀಡುತ್ತದೆ. ಆದರೆ ಕಮಲಿಯಾಗಿ ಐಶಾನಿ ಶೆಟ್ಟಿ ಪ್ರಥಮ ಚಿತ್ರದಲ್ಲಿಯೇ ಭರವಸೆ ಮೂಡಿಸುವ ನಟನೆ ನೀಡಿದ್ದಾರೆ. ಜೋಗದ ಹಾಡಿನಲ್ಲಿ ಜಲಪಾತದ ಸೌಂದರ್ಯದೊಂದಿಗೆ ನಾಯಕಿಯ ಗ್ಲಾಮರನ್ನೂ ಛಾಯಾಗ್ರಾಹಕರು ಯಥೇಚ್ಛವಾಗಿ ತುಂಬಿಕೊಂಡು ದೊಡ್ಡರಂಗೇಗೌಡರ ಸಾಹಿತ್ಯ ಮತ್ತು ಮೆಲೋಡಿ ಸಂಗೀತಕ್ಕೆ ರಂಗು ಹೆಚ್ಚಿಸಿದ್ದಾರೆ. ವರದಿಗಾರ್ತಿ ಪಾತ್ರದಲ್ಲಿನ ದೀಪಿಕಾ ದಾಸ್ ಜೊತೆಗಿನ ಹಾಡೊಂದರಲ್ಲಿ ಸಕತ್ತಾಗಿ ಕುಣಿದಿರುವ ಜೋತಿರಾಜ್ ರ ಸಿಗ್ನೇಚರ್ ಸ್ಟೆಪ್‍ ಕೂಡ ಅಕರ್ಷಕವೆನಿಸುತ್ತದೆ. ಕಮಲಿಯ ತಂದೆಯಾಗಿ ರಮೇಶ್ ಭಟ್, ಜೋತಿರಾಜ್ ನ ತಂದೆತಾಯಿರಾಗಿ ಸಂಕೇತ್ ಕಾಶಿ ಮತ್ತು ಲಕ್ಷ್ಮೀ ಚಂದ್ರಶೇಖರ್ ಹಳ್ಳಿಗರ ಪಾತ್ರಗಳಲ್ಲಿ ರಂಗಭೂಮಿ ಹಿನ್ನೆಲೆಯ ಶಕ್ತಿಯನ್ನು ಮತ್ತೆ ನೆನಪಿಸಿದ್ದಾರೆ. ಕೊನೆಯಲ್ಲಿ ಹೇಳಿರುವಂತೆ ಇಲ್ಲಿ ಜೋತಿರಾಜ್ ನ ಸಾಹಸಗಳು ಪೂರ್ಣ ಅನಾವರಣವಾಗಿಲ್ಲ. ಆದರೆ ಇಲ್ಲಿ ಆತ ನಡೆಸಿರುವ ಸಾಹಸಗಳನ್ನು ಕಂಡವರು ಕೊಟ್ಟ ದುಡ್ಡಿಗೆ ಮೋಸವಿಲ್ಲವೆಂದು ಹೇಳುವುದು ಖಚಿತ.