From the earlier FilmySphere, kept as published on 2014-12-13. It has not been updated.
Review of Jai Bajrangabali
FilmySphere critic
ಜೈ ಭಜರಂಗ ಬಲಿ ಸಾಹಸವೊಂದೇ ಆಕರ್ಷಣೆ ತಿಳಿ!
ಅಜೇಯ ರಾವ್ ನಾಯಕನಾಗಿದ್ದುಕೊಂಡು ತಡವಾಗಿ ತೆರೆಕಾಣುತ್ತಿರುವ ಚಿತ್ರ ಜೈ ಭಜರಂಗ ಬಲಿ. ಚಿತ್ರದ ಕಾನ್ಸೆಪ್ಟ್ ಮತ್ತು ನಿರೂಪಣೆಯ ಶೈಲಿ ಕೂಡ ಒಂದೆರಡು ದಶಕದ ಹಿಂದಿನ ರೀತಿಯಲ್ಲೇ ಇರುವುದು ಮಾತ್ರ ವಿಪರ್ಯಾಸ. ಹೇಗಾದರೂ ಮಾಡಿ ದುಡ್ಡು ಮಾಡಬೇಕೆನ್ನುವ ಯುವಕರ ತಂಡದಲ್ಲಿ ಚಿತ್ರದ ನಾಯಕ (ಅಜೇಯ)ನೂ ಒಬ್ಬ. ಪೊಲೀಸ್ ಚೆಕ್ಕಿಂಗ್ ನಡೆಸುವ ಏರಿಯಾಗಳಲ್ಲಿ ಹೆಲ್ಮೆಟ್ ಬಾಡಿಗೆ ನೀಡುವ ಆತನ ಕುತಂತ್ರಿ ಯೋಜನೆಯಲ್ಲಿ ನಾಯಕಿ (ಸಿಂಧೂ ಲೋಕನಾಥ್) ಪರಿಚಯವಾಗುತ್ತಾಳೆ. ಹೆಲ್ಮೆಟ್ ನ ಬಾಡಿಗೆಯಾದ 10ರೂಪಾಯಿಗಳನ್ನು ನೀಡಲು ದುಡ್ಡಿಲ್ಲದ ಕಾರಣ ತನ್ನ ಕೈನಲ್ಲಿದ್ದ ಉಂಗುರವನ್ನೇ ಆತನಿಗೆ ನೀಡುತ್ತಾಳೆ. ಆದರೆ ಅದನ್ನು ವಾಪಾಸು ಪಡೆಯುವ ಪ್ರಯತ್ನಗಳಲ್ಲಿ ಆಕೆ ನಾಯಕನಿಗೆ ಹತ್ತಿರವಾಗುತ್ತಾಳೆ. ಇನ್ನೇನು ಪರಸ್ಪರ ಪ್ರೀತಿಯನ್ನು ಹೇಳಬೇಕು ಎನ್ನುಷ್ಟರಲ್ಲಿ ನಾಯಕನ ರೌಡಿಸಂ ವ್ಯಕ್ತಿತ್ವದ ಬಗ್ಗೆ ಆಕೆಗೆ ಅರಿವಾಗಿ ಆಕೆ ದೂರಾಗುತ್ತಾಳೆ. ನಾಟಿ ವೈದ್ಯ(ಅನಂತನಾಗ್)ನ ಮಗಳಾದ ಆಕೆ ಆತನಿಂದ ದೂರವಿದ್ದುಕೊಂಡು ವಿದೇಶದಲ್ಲಿ ಡಾಕ್ಟರಾಗಿರುವ ತಾಯಿ(ಶ್ರುತಿ ನಾಯ್ಡು) ಜೊತೆಗೆ ಇರುತ್ತಾಳೆ. ರಜಾದಲ್ಲಿ ತಂದೆಯ ಮನೆಗೆಂದು ಬಂದಿದ್ದ ಆಕೆಗೆ ಅಜೇಯನ ಘಟನೆಯಿಂದ ನೊಂದು ಮತ್ತೆ ತಾಯಿಯ ಬಳಿಗೆ ಹೊರಟು ನಿಲ್ಲುತ್ತಾಳೆ. ಆದರೆ ಇದೇ ವೇಳೆ ನಾಯಕಿ ಮತ್ತು ನಾಯಕ ಪೊಲೀಸರ ಬಂಧನಕ್ಕೊಳಗಾಗುತ್ತಾರೆ. ಅಲ್ಲಿಗೆ ಇಂಟರ್ ವೆಲ್. ಮಧ್ಯಂತರದ ಬಳಿಕ ಅವರ ಬಂಧನಕ್ಕೆ ಕಾರಣವೇನೆಂಬುದು ಗೊತ್ತಾಗುತ್ತದೆ. ಅವರಿಬ್ಬರೂ ಸೇರಿ ಆಂಜನೇಯನ (ಭಜರಂಗಿ) ಚಿನ್ನದ ವಿಗ್ರಹವೊಂದನ್ನು ಅಪಹರಿಸಿರುವ ಆರೋಪ ಮತ್ತು ಅದರಿಂದ ಎದುರಿಸಬೇಕಾದ ಸಮಸ್ಯೆಗಳನ್ನು ಉಳಿದ ಭಾಗ ಹೇಳುತ್ತದೆ. ನಿರೀಕ್ಷೆಯಂತೆ ಕ್ಲೈಮ್ಯಾಕ್ಸ್ ನಲ್ಲಿ ಅವರು ಈ ಸಮಸ್ಯೆಯಿಂದ ಹೇಗೆ ಹೊರಗೆ ಬರುತ್ತಾರೆ; ನಿಜವಾದ ಕಳ್ಳರು ಯಾರು ಎಂಬುದನ್ನು ತೋರಿಸಲಾಗುತ್ತದೆ.
ಚಿತ್ರದಲ್ಲಿ ಒಳ್ಳೆಯ ಮನೆಯಲ್ಲಿ ಹುಟ್ಟಿರುವ ನಾಯಕ ಪೋಲಿಯಾಗಲು ಕಾರಣವೇನೆಂಬುದನ್ನು ಹೇಳಿಲ್ಲ. ಆತನ ತಂದೆಯಾಗಿ ಮಂಗಳೂರು ಸುರೇಶ್ ಒಂದೆರಡು ಕಡೆ ಕಾಣಿಸಿಕೊಂಡಿದ್ದಾರೆ. ನಾಟಿವೈದ್ಯನಾಗಿ ಅನಂತನಾಗ್ ಲುಕ್ ಗಷ್ಟೇ ಸೀಮಿತ. ವಿನಾಯಕರಾಮ್ ಕಲಗಾರು ಬರೆದ ಸಂಭಾಷಣೆಗಳು ಸಾಧಾರಣವಾಗಿವೆ. ಚಿತ್ರದಲ್ಲಿಯೂ ಅವರು ಸೀರಿಯಲ್ ಸಂಭಾಷಣಾಕಾರರನ್ನು ಬೆಂಬಲಿಸಲು ಹೊರಟಂತಿದೆ. ಚಿತ್ರದ ಹಾಡುಗಳು ಹೈಲೈಟಾಗಿದ್ದರೂ ಹರಿಕೃಷ್ಣ ತಮ್ಮ ಜಾಕಿ ಶೈಲಿಯ ಟ್ಯೂನ್ ನಲ್ಲೇ ಎದ್ದುಬಿದ್ದು ಹೊರಳಾಡಿರುವುದನ್ನು ಆಲಿಸಬಹುದು. ಐಟಂ ಹಾಡೊಂದರಲ್ಲಿ ನಾಗಶೇಖರ್ ಕೂಡ ಅನಗತ್ಯವಾಗಿ ಬಂದು ಹೋಗುತ್ತಾರೆ. ಶೋಭರಾಜ್ ರ ಲವಲವಿಕೆ, ರವಿಶಂಕರ್ ರ ಹೂಂಕರಿಕೆ ಕೂಡ ಚಿತ್ರಕ್ಕೆ ಯಾವುದೇ ರೀತಿ ಸಹಾಯ ಮಾಡಿಲ್ಲ. ಹೊಡೆದಾಟದ ದೃಶ್ಯಗಳನ್ನು ಮಾತ್ರ ಚಿತ್ರದ ಹೈಲೈಟ್ ಎನ್ನಬಹುದು. ಅದರಲ್ಲಿ ನಟ ಆದಿಲೋಕೇಶ್ ಮಾತ್ರವಲ್ಲ; ನಾಯಕ ಅಜೇಯ ರಾವ್ ಮತ್ತು ನಾಯಕಿ ಸಿಂಧೂ ಲೋಕನಾಥ್ ಒಳ್ಳೆಯ ಸ್ಕೋರ್ ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ಚಾಲಿಪೋಲಿಲು ತುಳು ಚಿತ್ರದ ಕತೆಯನ್ನು ಹೋಲುವ ಈ ಸಿನೆಮಾ ಇದರ ಸಾಹಸ ಸನ್ನಿವೇಶಕ್ಕಾಗಿ ಮಾತ್ರ ಆಕರ್ಷಣೆಯನ್ನು ಉಳಿಸಿಕೊಂಡಿದೆ ಎನ್ನಬಹುದು.