From the earlier FilmySphere, kept as published on 2014-12-04. It has not been updated.
Banaadi Kannada Movie Review
ಕನ್ನಡವೆ ಸತ್ಯ ಕನ್ನಡವೆ ನಿತ್ಯ
ಸರ್ಕಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಬುದ್ದವಂತರಲ್ಲ ಎಂದು ಪೋಷಕರು ತಿಳಿದುಕೊಳ್ಳುವುದು ತಪ್ಪು. ಅವರಿಗೂ ಶಿಕ್ಷಕರು ಉತ್ತಮ ಜ್ಘಾನ, ನಡವಳಿಕೆಯನ್ನು ಕಲಿಸಿಕೊಡುತ್ತಾರೆ ಎಂಬುದನ್ನು ‘ಬಾನಾಡಿ’ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದ ಕುರಿತು ಹೇಳುವುದಾದರೆ ವಿಧುರನಾದ ಅಪ್ಪ ಕೆಲಸಕ್ಕಾಗಿ ಅಮೇರಿಕಾಗೆ ಮಗ ಕಿಶೋರನನ್ನು ತಾತನ ಬಳಿ ಬಿಟ್ಟು ಹೋಗುತ್ತಾನೆ. ತಾತ ಮೊಮ್ಮಗನನ್ನು ಪ್ರೀತಿಯಿಂದ ಸರ್ಕಾರಿ ಶಾಲೆಗೆ ಸೇರಿಸಿ ಅವನ ಪ್ರತಿಯೊಂದು ಆಸೆಯನ್ನು ನೆರೆವೇರಿಸುತ್ತಿರುತ್ತಾನೆ. ಎಂಟು ವರ್ಷದ ಬಳಿಕ ಮಗನನ್ನು ನೋಡಲು ಬಂದ ಅಪ್ಪ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗೆ ನಮೂದು ಮಾಡಿಸುತ್ತಾನೆ. ಹೊಸ ಶಾಲೆಯ ರೀತಿ ನಿಯಮಗಳು ಕಂಡು ಮಾನಸಿಕ ಹಿಂಸೆ ಅನುಭವಿಸಿ ಇದರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಾನೆ. ಚಿಂತರಾದ ತಾತ ಇವನ ನೆನಪಿನಲ್ಲೆ ಕೊನೆ ಉಸಿರೇಳೆಯುತ್ತಾರೆ. ಕಿಶೋರ ಅಲ್ಲಿ ಇಲ್ಲಿ ಓಡಾಡಿ ಕೊನೆಗೆ ಹಗಲುವೇಷದ ತಂಡಕ್ಕೆ ಸೇರಿಕೊಂಡು ತನಗೆ ಯಾರು ಇಲ್ಲವೆಂದು ಸುಳ್ಳು ಹೇಳಿಕೊಂಡು ಅವರ ಪ್ರೀತಿಯನ್ನು ಸಂಪಾದಿಸಿ ಕೃಷ್ಣ ಹೆಸರಿನೊಂದಿಗೆ ಅವರಿಗೆ ಸರ್ಕಾರದಿಂದ ಸಹಾಯವಾಗುವಂತೆ ಮಾಡುತ್ತಾನೆ. ಮುಂದೆ ಅಮೇರಿಕಾದಿಂದ ಬಂದ ಅಪ್ಪನಿಗೆ ಕಿಶೋರ ಸಿಗುತ್ತಾನಾ, ಅವನು ಏನು ಸಾಧನೆ ಮಾಡುತ್ತಾನೆ ಎಂಬುದು ಚಿತ್ರ ನೋಡಿದರೆ ಒಳಿತು.
ಕಿರುತೆರೆ ಧಾರವಾಹಿಯಲ್ಲಿ ನಟಿಸಿದ್ದ ಪ್ರಫುಲ್ಲ ಕಿಶೋರನಾಗಿ ಅದ್ಬುತ ಅಭಿನಯದಿಂದ ಎಲ್ಲರ ಮನೆಸೆಳೆಯುತ್ತಾನೆ. ದತ್ತಾತ್ರೇಯ ತಾತನಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಪ್ಪನ ಪಾತ್ರದಲ್ಲಿ ರಾಜೇಶ್ ಸಹಜ ಅಭಿನಯ. ಅಭಿನಯ, ಹೇಮಾಶ್ರೀ ಶಿಕ್ಷಕರ ಪಾತ್ರದಲ್ಲಿ ಕಾಣಿಸಿಕೊಂಡರೆ, ರಮೇಶ್‍ಪಂಡಿತ್, ಬ್ಯಾಂಕ್‍ಜನಾರ್ಧನ್ ಪೋಲಿಸ್ ಪಾತ್ರದಲ್ಲಿ ನಟಿಸಿದ್ದಾರೆ. ಯುವ ಸಂಗೀತ ನಿರ್ದೇಶಕ ಕಾರ್ತಿಕ್‍ಶರ್ಮಾ ಸಂಯೋಜಿಸಿರುವುದರಲ್ಲಿ ಎರಡು ಹಾಡುಗಳು ಕೇಳಬಲ್. ಹಳ್ಳಿಯ ಸೊಬಗು ಹಾಗೂ ಬೆಂಗಳೂರು ಪರಿಸರವನ್ನು ಸುಂದರವಾಗಿ ತೋರಿಸುವುದರಲ್ಲಿ ಛಾಯಗ್ರಾಹಕ ಸಭಾಕುಮಾರ್ ಶ್ರಮ ಎದ್ದು ಕಾಣಿಸುತ್ತದೆ. ಬಹಳ ಜಾಣ್ಮೆಯಿಂದ ಒಂದೊಳ್ಳೆ ಸಂದೇಶ ಮತ್ತು ಉದ್ದೇಶವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಹೇಳುವುದಕ್ಕೆ ಪ್ರಯತ್ನಸಿರುವ ಕತೆ,ಚಿತ್ರಕತೆ,ಸಂಭಾಷಣೆ, ನಿರ್ದೇಶಕ ನಾಗರಾಜಕೋಟೆ ರಂಗಭೂಮಿಯಿಂದ ಚಲನಚಿತ್ರಕ್ಕೆ ಪಾದಾರ್ಪಣೆಮಾಡಿ ಉತ್ತಮ ಚಿತ್ರವನ್ನು ಉಣಬಡಿಸಿದ್ದಕ್ಕೆ ಉತ್ತಮ ಅಂಕಗಳನ್ನು ಕೊಡಬಹುದು. ನಿರ್ಮಾಪಕ ನಾಗರಾಜು ಪುತ್ರಿ ಬೇಬಿ ಧೃತಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ.