Skip to content
FilmySphere

From the earlier FilmySphere, kept as published on 2014-12-01. It has not been updated.

Raj Sanje

ಅರಮನೆ ಮೈದಾನದಲ್ಲಿ ಕಲರ್‍ಫುಲ್ ರಾಜ್ ಸಂಜೆ

ಮುಖ್ಯಮಂತ್ರಿ,ಸಚಿವರು, ರಜನಿಕಾಂತ್, ಚಿರಂಜೀವಿ ಸೇರಿದಂತೆ ಡಾ.ರಾಜ್‍ಕುಮಾರ್ ಸ್ಮಾರಕ ಲೋಕಾರ್ಪಣೆಯ ನಂತರ ಸಾಯಂಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಚಂದನವನದ ಕಲಾವಿದರಿಂದ ರಾಜ್ ಚಿತ್ರಗಳ ಗೀತೆಗಳಿಗೆ ಎಲ್ಲರೂ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದರು.ಕಾರ್ಯಕ್ರಮ ಒಂದು ಘಂಟೆ ತಡವಾದರೂ ಅಭಿಮಾನಿಗಳು ಸಾವದಾನದಿಂದ ತಾಳ್ಮೆ ಕಳೆದುಕೊಳ್ಳದೆ ಶಿಳ್ಳೆ,ಕರತಾಡನದೊಂದಿಗೆ ಮತ್ತಷ್ಟು ಮೆರುಗು ತಂದರು.ಹಿರಿಯ ನಟಿ ಬಿ.ಸರೋಜದೇವಿ ‘ಭಕ್ತಕುಂಬಾರ ಚಿತ್ರವನ್ನು ರಾಜ್ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ.ಅವರ ಸಿನಿಮಾ ವಿಶ್ವವಿದ್ಯಾಲಯ ಇದ್ದಂತೆ.ಅವರಂತಹ ಸರಳ ಜೀವಿಯನ್ನು ಎಂದು ನೋಡಿಲ್ಲ’ ಎಂದು ಹಳೆಯ ದಿನದ ಮೆಲುಕನ್ನು ನೆನಪು ಮಾಡಿಕೊಂಡರು.ರಾಜ್ ಜೊತೆಗಿನ ಸಂಪರ್ಕ ಅವಿಸ್ಮರಣೀಯ. ಅವರ ಶ್ರದ್ದೆ,ಶಿಸ್ತು ಎಲ್ಲರೂ ಕಲಿಯಬೇಕು ಎನ್ನುತ್ತಾ ಕಸ್ತೂರಿನಿವಾಸದ ದಿನಗಳನ್ನು ನೆನಪಿಸಿಕೊಂಡರು ಭಗವಾನ್. ಗಣೇಶನ ಪ್ರಾರ್ಥನಾ ಗೀತೆಗೆ ಶ್ರೀಧರ್ ತಂಡವು ನೃತ್ಯ ಮಾಡುವ ಮೂಲಕ ಕಾರ್ಯಕ್ರಮ ಶುರುವಾಯಿತು. ಅಕುಲ್‍ಬಾಲಾಜಿ, ಪ್ರಿಯಾಂಕಚಂದ್ರ ನಾಡಗೀತೆಗೆ ಹೆಜ್ಜೆ ಹಾಕಿ ನಮನ ಸಲ್ಲಿಸಿದರು. ವಿಜಯರಾಘವೇಂದ್ರ, ಮೇಘನಾರಾಜ್ ಏರಿ ಮೇಲೆ ಏರಿ ಹಾಡಿಗೆ,ಗಂಗಿ ನಿನ್ ಮೇಲೆ ಮನಸೈತೆ ಗೀತೆಗೆ ಚಿರಂಜೀವಿ ಸರ್ಜಾ,ಸಂಜನಾ, ಆ ರತಿಯೇ ಧರಗಿಳಿದಂತೆ ಹಾಡಿಗೆ ನವೀನ್,ಸೋನು,ನಾನಿನ್ನ ಮರೆಯಲಾರೆ ಗೀತೆಗೆ ಗಣೇಶ್,ಅಮೂಲ್ಯ, ರವಿಚಂದ್ರನ್ ನಾನಿರುವುದೆ ನಿನಗಾಗಿ ಹಾಡು,ರಣರಂಗ ಚಿತ್ರಕ್ಕೆ ಶಿವರಾಜ್‍ಕುಮಾರ್ ಹೆಜ್ಜೆ ಹಾಕಿ ರಂಜಿಸಿದರು.

ಕನ್ನಡದ ಮಾತು ಚಂದ ಗೀತೆಗೆ ಉಪೇಂದ್ರ ಹೆಜ್ಜೆಹಾಕಿ ಅಣ್ಣನೊಂದಿಗೆ ನಡೆದ ಸಹಿ ಘಟನೆಯನ್ನು ಮೆಲುಕು ಹಾಕಿದರು.ಪುನೀತ್ ರಾಜ್‍ಕುಮಾರ್ ರಾಜ್ ಗೀತೆಗೆ ಡ್ಯಾನ್ಸ್ ಮಾಡಿದರು.ಲೇ ಲೇ ಅಪ್ಪನ ಮಗಳೆ ಹಾಡಿಗೆ ಯಶ್, ರಚಿತಾರಾಮ್ ಡ್ಯಾನ್ಸ್ ಮಾಡಿದರೆ,ಅರ್ಜುನ್‍ಸರ್ಜಾ, ಹರಿಪ್ರಿಯಾ ಜೊತೆಯಾಗಿ ಹೆಜ್ಜೆ ಹಾಕಿದ್ದು, ಸಚಿವ,ನಟ ಅಂಬರೀಷ್ ನೀ ಬಂದು ನಿಂತಾಗ ಹಾಢಿಗೆ ಸುಮಲತಾರೊಂದಿಗೆ ಹೆಜ್ಜೆ ಹಾಕಿ ಎಲ್ಲರಿಗೂ ಸಂತಸ ತಂದರು. ಅಭಿಜಿತ್, ಶಿವಕುಮಾರ್,ಪದ್ಮಾವಾಸಂತಿ ಬಬ್ರುವಾಹನ ಪ್ರಹಸನ ಮಾಡಿದರು. ಕಾರ್ಯಕ್ರಮದಲ್ಲಿ ಎಲ್ಲರೂ ರಾಜ್ ಗೀತೆಗಳಿಗೆ ಹೆಜ್ಜೆ ಹಾಕಿದರೆ ದರ್ಶನ್, ಸುದೀಪ್ ಕ್ಯಾಟ್ ವಾಕ್ ಮಾಡಿ ಅಭಿಮಾನಿಗಳತ್ತ ಕೈಬೀಸಿ ತೆರಳಿದರು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿ ಅವರ ವಿರುದ್ದ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಸುಮಾರು ಐದು ಘಂಟೆಗಳ ಜಬರ್‍ದಸ್ತ್ ಸಾಂಸ್ಕ್ರತಿಕ ಕಾರ್ಯಕ್ರಮವು ನಿರ್ದೇಶಕ ಎಸ್.ನಾರಾಯಣ್ ಪಾರುಪಥ್ಯದಲ್ಲಿ ಜರುಗಿತು.