Skip to content
FilmySphere

From the earlier FilmySphere, kept as published on 2014-11-15. It has not been updated.

6-5=2 HINDI Films Review

6-5=2 ಅಂದರೆ ಮೈನಸ್ ನಲ್ಲೇ ಪ್ಲಸ್ಸು!

ಕನ್ನಡದ ಚಿತ್ರವೊಂದು ಅಪರೂಪಕ್ಕೆ ಹಿಂದಿಗೂ ರಿಮೇಕ್ ಆಗಿದೆ. ಚಿತ್ರದ ಹೆಸರಿನ ಸಮೇತ ಬಾಲಿವುಡ್ ಸೇರಿರುವ 6-5=2 ಅಲ್ಲಿ ಯಾವ ರೀತಿ ಮೂಡಿ ಬಂದಿದೆ ಎಂಬ ಕುತೂಹಲ ಮೂಲ ಚಿತ್ರವನ್ನು ಕಂಡ ಕನ್ನಡಿಗರಿಗೂ ಇದೆ. ಹೇಗಿದೆ ಎಂಬುದಕ್ಕೆ ಉತ್ತರ ಚಿತ್ರದ ಹೆಸರಿನಲ್ಲೇ ಇದೆ. ಮೂಲದಿಂದ ದೊಡ್ಡ ಮೊತ್ತವೇ ಮೈನಸ್ ಆದರೂ ರಿಸಲ್ಟ್ ನೋಡಿದಾಗ ಪಾಸಿಟಿವ್ (ಅದೂ ಹೆಚ್ಚೇ!) ಆಗಿದೆ. ಚಿತ್ರದಲ್ಲಿ ಸುಹಾನ ಮತ್ತು ಪ್ರಿಯಾ ಎಂಬ ಇಬ್ಬರು ಹುಡುಗಿಯರೊಂದಿಗೆ ಸಿದ್ಧಾರ್ಥ್, ಭಾನು ಜೈರಾಜ್, ಹರ್ಷ ಲುಲ್ಲ, ರಾಜಾ ಎಂಬ ಟೀನೇಜ್ ಹುಡುಗರು ಸೇರಿಕೊಂಡು ಎತ್ತರದ ಅರಣ್ಯ ಪ್ರದೇಶವೊಂದಕ್ಕೆ ಟ್ರೆಕ್ಕಿಂಗ್ ಹೋಗುತ್ತಾರೆ. ಅಲ್ಲಿ ಸಿದ್ಧಾರ್ಥ್ ಗೆ ಮರಕ್ಕೆ ಕಟ್ಟಿದ್ದ ತಲೆಬುರುಡೆಯೊಂದು ಕಾಣಿಸುತ್ತದೆ. ಅದನ್ನು ಕಿತ್ತು ತನ್ನೊಂದಿಗೆ ಇರಿಸಿಕೊಂಡ ನಂತರ ಅಲ್ಲಿ ಬಹಳಷ್ಟು ಅನಾಹುತಗಳು ನಡೆಯತೊಡಗುತ್ತದೆ. ಆದರೆ ಆ ಬಗ್ಗೆ ಅವರು ಅಷ್ಟಾಗಿ ಗಮನ ಹರಿಸುವುದಿಲ್ಲ. ಆದರೆ ಅರಣ್ಯದ ತುದಿ ತಲುಪಿ ಹಿಂದಿರುಗುತ್ತಿದ್ದಂತೆ ಅವರಲ್ಲಿ ಒಬ್ಬೊಬ್ಬರೇ ವಿಚಿತ್ರ ಸಾವು ಕಾಣಲಾರಂಭಿಸುತ್ತಾರೆ. ಆರುದಿನದೊಳಗೆ ಒಟ್ಟು ಐದು ಮಂದಿ ಸಾಯುವುದರೊಂದಿಗೆ ಚಿತ್ರ ಕೊನೆಯಾಗುತ್ತದೆ. ಬಾಲಿವುಡ್ ಗೆ ಇದು ಹೊಸ ಮಾದರಿಯ ಚಿತ್ರ. ಅಂದರೆ ಇಡೀ ಚಿತ್ರವನ್ನು ಟ್ರೆಕ್ಕಿಂಗ್ ಹೋದ ಸಿದ್ಧಾರ್ಥನ ಕ್ಯಾಮರಾದಲ್ಲಿ ಸೆರೆಸಿಕ್ಕ ದೃಶ್ಯಗಳಂತೆ ತೋರಿಸಲಾಗಿದೆ. ಹೊರಟ ಆರು ಮಂದಿಯಲ್ಲಿ ಅನಾರೋಗ್ಯಕ್ಕೊಳಗಾಗಿ ಅರ್ಧದಿಂದಲೇ ಮರಳಿ ಬಂದ ರಾಜಾ ಈ ಘಟನೆಯ ಬಗ್ಗೆ ಹೇಳುತ್ತಾನೆ. ಮತ್ತು ಕಾಡಿನಲ್ಲಿ ಅನಾಥವಾಗಿ ಸಿಕ್ಕ ಸಿದ್ಧಾರ್ಥನ ಕ್ಯಾಮರಾ ನಡೆದ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂಬುದು ನಿರ್ದೇಶಕರ ಕಾನ್ಸೆಪ್ಟ್. ಹಾಗಾಗಿ ಚಿತ್ರಕ್ಕೆ ನಿರ್ದೇಶಕರಿಲ್ಲ. ಸಿದ್ಧಾರ್ಥ ಚಿತ್ರೀಕರಿಸಿದ ನೈಜ ವೀಡಿಯೋಗಳನ್ನು ಎಡಿಟ್ ಮಾಡಿ ಪ್ರದರ್ಶಿಸಲಾಗುತ್ತಿದೆ ಎಂದು ನಿರ್ದೇಶಕ ಭರತ್ ಜೈನ್ ಹೇಳುತ್ತಾರೆ. ಇದನ್ನೇ ಮೂಲ ಚಿತ್ರದ ನಿರ್ದೇಶಕ ಕನ್ನಡದ ಪ್ರೇಕ್ಷಕರ ಮುಂದೆ ಹೇಳಿದಾಗ ನಂಬಿದವರೊಂದಿಗೆ ನಂಬಬೇಕೋ, ಬೇಡವೋ ಎಂದು ಸಂದೇಹಪಟ್ಟವರೂ ಇದ್ದರು! ಆದರೆ ಈಗ ಸತ್ಯವೇನೆಂದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಈ ಮಾದರಿಯ ಚಿತ್ರಗಳು ರಿಮೇಕ್ ಅದಾಗ ಅದೇ ಹೇಳಿಕೆಯನ್ನೇ ನಿರ್ದೇಶಕರು ರಿಮೇಕ್ ಮಾಡುವುದು ಅರ್ಥಹೀನವೆನಿಸುತ್ತದೆ! ಇನ್ನು ಮೂಲ ಚಿತ್ರ ನೋಡಿದವರಿಗೆ ಅಲ್ಲಿನ ನೈಜತೆ ಇಲ್ಲಿ ಕಾಣಿಸುವುದಿಲ್ಲ. ಆದರೆ ನಾಯಕಿಯರ ಗ್ಲಾಮರ್ ಗೆ ಕೊರತೆಯಿಲ್ಲ. ಕನ್ನಡಿಗ ಛಾಯಾಗ್ರಾಹಕ ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ ಯಾಣ ಸೇರಿದಂತೆ ಕಾಡಿನ ದೃಶ್ಯಗಳು ಚೇತೋಹಾರಿಯಾಗಿ ಕಾಣಿಸುತ್ತದೆ. ಪರದೆಯ ಮೇಲೆ ಅತೀಂದ್ರೀಯ ಶಕ್ತಿಯ ಪ್ರವೇಶವಾಗುತ್ತಿದ್ದ ಹಾಗೆ ದೃಶ್ಯಗಳು ಕಪ್ಪು ಬಿಳುಪಿಗೆ ಬದಲಾಗುವುದು; ಅಸ್ಪಷ್ಟತೆಯುಂಟಾಗುವುದು ಮತ್ತು ದೆವ್ವ ಒಂದೇ ಹೆಜ್ಜೆಯನ್ನು ಬಲವಾಗಿ ಊರಿಕೊಂಡುತೆ ಬರುವಂತೆ ನೀಡಿರುವ ಹಿನ್ನೆಲೆ ಶಬ್ಧಗ್ರಹಣ ಮೊದಲಾದವು ಆಕರ್ಷಕ. ದೆವ್ವವನ್ನು ತೋರಿಸದೆಯೇ ಭೀತಿಗೊಳಿಸುವ ನಿರ್ದೇಶಕರ ಕಲ್ಪನೆಯೂ ಮೆಚ್ಚತಕ್ಕದ್ದು. ರಾಜನಾಗಿ ಗೌರವ್ ಪಾಸ್ವಾಲ ಮತ್ತು ಲುಲ್ಲನಾಗಿ ಗೌರವ್ ಕೊಠಾರಿ ಮನಸೆಳೆಯುತ್ತಾರೆ. ದೆವ್ವದ ಸಿನೆಮಾ ಎಂದ ಮೇಲೆ ಕತೆಯೊಳಗೆ ಲಾಜಿಕ್ ಹುಡುಕುವುದರಲ್ಲಿ ಅರ್ಥವಿಲ್ಲ. ಚಿತ್ರದಲ್ಲಿ ಹಿಂಸೆಗೆ ಹೇಗೆ ಆದಷ್ಟು ಕಡಿವಾಣ ಹಾಕಲಾಗಿದೆಯೋ ಅದೇ ರೀತಿ ಅಸಭ್ಯ ಸಂಭಾಷಣೆಗಳಿಗೂ ಲಗಾಮು ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಏನೇ ಇದ್ದರೂ ಥ್ರಿಲ್ಲರ್ ಚಿತ್ರವನ್ನು ಇಷ್ಟಪಡುವವರಿಗೆ ಇದು ಖಂಡಿತಾ ಮನರಂಜನೆ ಒದಗಿಸುತ್ತದೆ.