From the earlier FilmySphere, kept as published on 2014-11-15. It has not been updated.
Mirchi Mandakki Kadak Chai_Film Audio Release
ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಹಾಡುಗಳ ಬಿಡುಗಡೆ
ಸಂಜೋತಾ ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ ಮಿರ್ಚಿ ಮಂಡಕ್ಕಿ ಕಡಕ್ ಚಾಯ್. ಚಿತ್ರದ ಸೀಡಿ ಬಿಡುಗಡೆಯನ್ನು ಬೆಲ್ ನಲ್ಲಿ ನೆರವೇರಿಸಲಾಯಿತು. ಖ್ಯಾತ ನಿರ್ದೇಶಕ ಮತ್ತು ಸಂಜೋತಾರ ಆದರ್ಶ ಟಿ.ಎಸ್ ನಾಗಾಭರಣ ಸೀಡಿಗಳನ್ನು ಬಿಡುಗಡೆಗೊಳಿಸಿದರು.
ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸಂಜೋತಾ ಮಹೇಶ್ ರಾವ್, ಶಶಾಂಕ್ ಮೊದಲಾದವರಿಗೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹಾಗಾಗಿ ಸಮಾರಂಭಕ್ಕೆ ಅವರು ತಮ್ಮ ಗುರುಗಳನ್ನು ಕೂಡ ಆಹ್ವಾನಿಸಿದ್ದು, ಶಶಾಂಕ್ ಹಾಜರಾಗಿದ್ದರು. ತನಗೆ ಒಂದೇ ಚಿತ್ರದಲ್ಲಿ ಸಹಾಯಕಿಯಾಗಿದ್ದರೂ ಬಳಿಕ ಚಿತ್ರವೊಂದನ್ನು ನಿರ್ಮಿಸಿ, ನಿರ್ದೇಶಿಸುವ ಮಟ್ಟಿಗೆ ಬೆಳೆದಿರುವುದರಿಂದ ಈಕೆ ಗುರುವನ್ನು ಮೀರಿಸಿದ ಶಿಷ್ಯೆ ಎಂದರು. ಸಾಮಾನ್ಯವಾಗಿ ಹೊಸಬರು ಸ್ಟಾರ್ ಗಳನ್ನೇ ಗುರಿಯಾಗಿಸಿಕೊಂಡು ಕತೆ ಮಾಡುತ್ತಾರೆ. ಆದರೆ ಹೊಸಬರ ತಂಡವನ್ನೇ ಕಟ್ಟಿಕೊಂಡು ಬಂದಿರುವ ಈಕೆಗೆ ನಿಜಕ್ಕೂ ಸಾಧಕಿ ಎಂದು ಅವರು ಹೊಗಳಿದರು. ಸಂಗೀತ ನಿರ್ದೇಶಕ ಹರಿಕಾವ್ಯ ಹೆಚ್ಚೇನೂ ಮಾತನಾಡಲಿಲ್ಲ. ಅವರ ಪೂರ್ತಿ ಹೆಸರು ಹರೀಶ್ ಮತ್ತು ಪತ್ನಿ ಕಾವ್ಯಳ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡು ಹರಿಕಾವ್ಯವಾಗಿದ್ದಾರೆಂಬ ಮಾಹಿತಿ ದೊರೆಯಿತು. ಚಿತ್ರದ ಮೂಲಕ ನಾಯಕನಾಗಿ ನಟಿಸುತ್ತಿರುವ ಕಿರುತೆರೆ ಪ್ರತಿಭೆ ಪ್ರದೀಪ್ ಬಡೆಕ್ಕಿಲ 'ಚಿತ್ರಕ್ಕಾಗಿ ನಾನು ಒಂದು ಹಾಡನ್ನೂ ಹಾಡಿದ್ದೇನೆ' ಎಂದು ಸಂಭ್ರಮಿಸಿದರು. ಚಿತ್ರದ ಗೀತರಚನೆಕಾರರಲ್ಲಿ ಒಬ್ಬರಾದ ಕೆ.ಕಲ್ಯಾಣ್ 'ಸಂಜೋತಾ ನೋಡಲು ಮಾತ್ರ ಸೌಮ್ಯವಾಗಿದ್ದಾರೆ. ಆದರೆ ಕೆಲಸ ತೆಗೆಯುವ ವೇಳೆ ಟೆರರ್ ಆಗಿ ಮುನ್ನುಗ್ಗುತ್ತಾರೆ' ಎಂದರು. ಸೈಕಾಲಜಿ ಮುಗಿಸಿರುವ ನಮ್ರತಾಗೂ ಇದು ನಟನೆಯ ಪ್ರಥಮ ಅನುಭವವಂತೆ. ಚಿತ್ರದಲ್ಲಿ ಅವರು ಕಡಕ್ ಚಾಯ್ ನ ಸ್ವಭಾವವನ್ನು ಪ್ರತಿನಿಧಿಸುವುದಾಗಿ ತಿಳಿಸಿದರು. ಮಂಡಕ್ಕಿಯಾಗಿ ನಟಿಸಿರುವ ಸಚಿನ್ ಮಾತನಾಡಿ ತನ್ನದು ಸೈಲೆಂಟ್ ಪಾತ್ರ ಎಂದರು. ಮಂಡಕ್ಕಿಗೆ ಎದುರಾಗಿ ಬರುವ ಪಾತ್ರದಲ್ಲಿ ಅಪೂರ್ವ ನಟಿಸಿದ್ದಾರೆ. ಮತ್ತೋರ್ವ ನಾಯಕಿ ನಿಮಿಷಾ ತಾನು ಮಿಸ್ ಕೇರಳ ಆಗಿದ್ದೆನೆಂದು ಹೇಳಿದರು. ವಿಶಾಲ್ ಮುದ್ದು ಕೃಷ್ಣನ ಪಾತ್ರದಲ್ಲಿ ನಟಿಸಿದ್ದು ಹೆಸರಿಗೆ ತಕ್ಕಂತೆ ತಮ್ಮ ಪಾತ್ರ ಮುದ್ದಾಗಿದೆ ಎಂದರು. ಮಗನ ಮದುವೆ ತಯಾರಿ ಸೇರಿದಂತೆ ಇನ್ನಿತರ ಗಡಿಬಿಡಿಯಲ್ಲಿದ್ದ ನಾಗಾಭರಣ್ ಸರಳವಾಗಿ ಟ್ರ್ಯಾಕ್ ಸೂಟಲ್ಲಿ ಆಗಮಿಸಿ ತಂಡಕ್ಕೆ ಶುಭಕೋರಿ ಸೀಡಿ ಬಿಡುಗಡೆಗೊಳಿಸಿದರು.