Skip to content
FilmySphere

From the earlier FilmySphere, kept as published on 2014-11-14. It has not been updated.

Pyar ka Goal Gumbaz movie audio has been released

ಪ್ಯಾರ್ ಕಾ ಗೋಲ್ ಗುಂಬಜ್ ಚಿತ್ರದ ಸೀಡಿ ಬಿಡುಗಡೆ

ಕೊಟ್ಳಲ್ಲಪ್ಪೋ ಕೈ ಚಿತ್ರದ ನಾಯಕ ಧನುಶ್ ಪ್ಯಾರ್ ಕ ಗೋಲ್ ಗುಂಬಜ್ ಎಂಬ ಚಿತ್ರದ ಮೂಲಕ ಜಗತ್ತಿನ ಮತ್ತೊಂದು ಅದ್ಭುತವನ್ನು ತೋರಿಸಲು ಮುಂದಾಗಿದ್ದಾರೆ. ಚಿತ್ರದ ಕಾನ್ಸೆಪ್ಟ್ ಬಗ್ಗೆ ಗೊತ್ತಿಲ್ಲವಾದರೂ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಂಗೀತ, ಗೀತರಚನೆ, ಗಾಯನದ ಜೊತೆಗೆ ಛಾಯಾಗ್ರಹಣದೊಂದಿಗೆ ಧ್ವನಿ ಮುದ್ರಿಕೆಯನ್ನು ತಮ್ಮದೇ ಸಂಸ್ಥೆಯ ಮೂಲಕ ಮಾರುಕಟ್ಟೆಗೆ ತಂದು ದಾಖಲೆ ಸಷ್ಠಿಸಿದ್ದಾರೆಂದೇ ಹೇಳಬಹುದು.

ಚಿತ್ರಕ್ಕೆ ಹಿಂದಿಯಲ್ಲೊಂದು ಹೆಸರು ಅದರ ಕೆಳಗೆ ಸಪ್ತಸ್ವರಗಳ ಪ್ರೀತಿಯ ಪ್ರತಿಧ್ವನಿ ಎಂಬ ಸಬ್ ಟೈಟಲ್ ಜೊತೆಗೆ ಮೊಹಬತ್ ಕ ಪೀಚೆ ಎಂಬ ಹಿಂದಿ ಸಬ್ ಟೈಟಲನ್ನೂ ಇಟ್ಟಿದ್ದಾರೆ. ಜೊತೆಗೆ ನಾನು ಸ್ಟಾರ್ ಅಲ್ಲ ಜನಗಳ ಸೇವಕ ಎಂಬ ಸ್ಲೋಗನ್ ಕೂಡ ಇದೆ. ಚಿತ್ರ ಸೀಡಿ ಬಿಡುಗಡೆಗೊಳಿಸಲು ಆಗಮಿಸಿದ್ದ ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡುತ್ತಾ 'ನಾನು 1983ರ ಹಿಂದೆ ವರ್ಷಕ್ಕೆ 80ರಷ್ಟು ಚಿತ್ರಗಳನ್ನು ನೋಡುತ್ತಿದ್ದೆ. ಈಗ ನೋಡೋದೇ ಅಪರೂಪ. ಇಲ್ಲಿ ಬಿಡುಗಡೆ ಮಾಡಿದ ಹಾಡು ಮತ್ತು ಟ್ರೇಲರ್ ನಲ್ಲಿ ನಾಯಕ ಮದ್ಯಪಾನಿಯಾಗಿರುವುದನ್ನು ತೋರಿಸಲಾಗಿದೆ. ಅದು ಎಷ್ಟು ಸರಿ ತಪ್ಪು ಎಂಬುದನ್ನು ಚಿತ್ರ ನೋಡದೇ ಹೇಳಿದರೆ ತಪ್ಪಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು. ನಾಯಕ ಧನುಶ್ ನ ಅಣ್ಣ ನಾಗರಾಜ್ ನನ್ನ ಆತ್ಮೀಯ ಹಾಗಾಗಿ ಸೀಡಿ ಬಿಡುಗಡೆಗೊಳಿಸಲು ಬಂದಿದ್ದೇನೆ ಎಂದರು ಸುರೇಶ್ ಕುಮಾರ್. ಬೆಂಗಳೂರಿನ ಉಪಮೇಯರ್ ರಂಗಣ್ಣ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಕ್ಷೇತ್ರದ ಹುಡುಗನ ಸಿನೆಮಾ ಕ್ಷೇತ್ರದ ಬೆಳವಣಿಗೆಗೆ ಶುಭ ಕೋರಿದರು. ' ಸುರೇಶ್ ಕುಮಾರ್ ರಂಥ ರಾಜಕಾರಣಿಗಳು ನಿಜವಾದ ಸಮಾಜ ಸೇವೆ ಮಾಡುತ್ತಾರೆ. ಆದರೆ ನಾನು ಚಿತ್ರದ ಮೂಲಕ ಸಮಾಜ ಸೇವೆ ಮಾಡುವ ಸೇವಕ' ಎಂದ ಧನುಶ್ ತಮ್ಮ ಸ್ಲೋಗನ್ ಗೆ ಅರ್ಥ ನೀಡಲು ಪ್ರಯತ್ನಿಸಿದರು. ಚಿತ್ರದ ನಾಯಕಿ ಪೂರ್ಣಿಮಾಗೆ ಇದು ಪ್ರಥಮ ಚಿತ್ರವಾಗಿದ್ದು ನಿರ್ದೇಶಕರು ಆಡಿಷನ್ ನಡೆಸಿ ತನ್ನನ್ನು ಆರಿಸಿರುವುದಾಗಿ ತಿಳಿಸಿದರು. ನಾಯಕಿಯ ಮಾವನ ಪಾತ್ರದಲ್ಲಿ ನಟಿಸಿರುವ ನಕುಲ್ ಸೇರಿದಂತೆ ಛಾಯಾಗ್ರಹಣದಲ್ಲಿ ತನಗೆ ನೆರವಾದ ಗಂಗು ಮತ್ತು ಕೆ.ಕೆಯವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು ಧನುಶ್.