Skip to content
FilmySphere

From the earlier FilmySphere, kept as published on 2014-11-14. It has not been updated.

Rukku movie muhurtham

'ರುಕ್ಕು' ಚಿತ್ರಕ್ಕೆ ಮುಹೂರ್ತ

ಬಸವರಾಜ್ ಬಳ್ಳಾರಿ ನಿರ್ದೇಶನದ ಮೂರನೇ ಚಿತ್ರ 'ರುಕ್ಕು' ವಿಗೆ ಆರ್.ಟಿ ನಗರದ ಸಾಯಿಬಾಬ ದೇಗುಲದಲ್ಲಿ ಮುಹೂರ್ತವಾಯಿತು. ಬಸವರಾಜ್ ಎರಡನೆಯದಾಗಿ ನಿರ್ದೇಶಿಸತೊಡಗಿದ್ದ 'ಬಿಳಿಹಾಳೆ' ಚಿತ್ರದ ತಂಡವನ್ನೇ ಇದರಲ್ಲಿಯೂ ಬಳಸಿಕೊಂಡಿದ್ದಾರೆ. ಇವರು ಪ್ರಥಮದಲ್ಲಿ ನಿರ್ದೇಶಿಸಿದ್ದ ಸೀನ ಎಂಬ ಚಿತ್ರ ವರ್ಷಗಳ ಹಿಂದೆ ತೆರೆಕಂಡಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

ಚಿತ್ರದ ನಾಯಕ ಶ್ರೇಯಸ್ ತಂದೆಯೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷದಿಂದ ತ್ರಿನೇತ್ರ ರಂಗಭೂಮಿಯಲ್ಲಿ ಕಲಾವಿದನಾಗಿ ತೊಡಗಿಸಿಕೊಂಡ ಅನುಭವ ಅವರಿಗಿದೆ. ಚಿತ್ರದಲ್ಲಿ ಜಮೀನ್ದಾರನ ಮಗನಾಗಿ ನಟಿಸುತ್ತಿದ್ದಾರೆ. ನಾಯಕಿ ರುಕ್ಕುವಾಗಿ ಬಳ್ಳಾರಿಯ ಬೆಡಗಿಯ ಪಾತ್ರದಲ್ಲಿ ರಶ್ಮಿತಾ ನಟಿಸಿದ್ದಾರೆ. ಸಂಕಲನಕಾರ ನಾಗೇಂದ್ರ ಅರಸ್ ಸಂಕಲನದ ಜೊತೆಗೆ ನಟನಾಗಿಯೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದರು. ಥ್ರಿಲ್ಲರ್ ಮಂಜು ತಮ್ಮ ಸಾಹಸ ಪ್ರದರ್ಶನಕ್ಕಿರುವ ಎರಡು ಆ್ಯಕ್ಷನ್ ದೃಶ್ಯಗಳಲ್ಲಿ ಒಂದನ್ನು ರಾತ್ರಿಯ ರೈನ್ ಎಫೆಕ್ಟ್ ನಲ್ಲಿ ಮಾಡಲಾಗುವುದೆಂಬ ಥ್ರಿಲ್ ಹಂಚಿಕೊಂಡರು. ಛಾಯಾಗ್ರಾಹಕ ರೇಣು ಚಿತ್ರಕ್ಕೆ ರೆಡ್ ಎಪಿಕ್ ಕ್ಯಾಮರಾ ಬಳಸುತ್ತಿರುವುದಾಗಿ ತಿಳಿಸಿದರು. ಚಿತ್ರವೊಂದು ಸಾಧಾರಣ ಪ್ರೇಮಕತೆಯಾದರೂ ಕ್ಲೈಮ್ಯಾಕ್ಸ್ ನಲ್ಲಿ ವಿಭಿನ್ನತೆ ತೋರಿಸುವುದಾಗಿ ಹೇಳಿದ ನಿರ್ದೇಶಕರು ಅಲ್ಲಿಯವರೆಗೆ ಸಾಧುಕೋಕಿಲಾರ ಹಾಸ್ಯ ದೃಶ್ಯಗಳ ಮೂಲಕ ಚಿತ್ರವನ್ನು ಸಾಗಹಾಕುವುದಾಗಿ ಹೇಳಿದರು! ರಮೇಶ್ ಪಾಟೀಲ್ ಎಂಬ ಹೊಸಬರು ಸಂಭಾಷಣೆ ಬರೆದಿರುವ ಚಿತ್ರಕ್ಕೆ ರವೀಶ್ ರಾಜ್ ಸಂಗೀತವಿದೆ. ಬೆಂಗಳೂರು, ಮಡಿಕೇರಿಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ತಂಡದ್ದಾಗಿದೆ.