From the earlier FilmySphere, kept as published on 2014-11-14. It has not been updated.
Nani Movie shooting started
ಚಿತ್ರೀಕರಣವಾರಂಭಿಸಿದ 'ನಾನಿ'
ತಾಯಿಯಾಗಿ ಸುಹಾಸಿನಿ
ಬ್ರಾಹ್ಮಿ ಮುಹೂರ್ತದಲ್ಲಿ ಮನೆಗೆ ಬರುವುದಾಗಿ ಹೇಳಿದ ಅಘೋರಿ ಸನ್ಯಾಸಿಯ ಸ್ವಾಗತದಲ್ಲಿ ನಿರತಳಾಗಿರುತ್ತಾಳೆ ಚಿತ್ರದ ನಾಯಕಿ. ಶುಚಿರ್ಭೂತೆಯಾಗಿ ಬಂದು 5,000 ದೀಪಗಳನ್ನು ಹಚ್ಚಿ ಸ್ವಾಗತಿಸುವ ಆಕೆಯಲ್ಲಿ ಬೇರೊಂದು ಮಗುವಿನ ಆತ್ಮ ಆವಾಹಿತಗೊಂಡಿದೆಯೆಂಬುದು ಎಲ್ಲರ ಮಾತಾಗಿರುತ್ತದೆ. ಆರಂಭದಲ್ಲಿ ಅದನ್ನು ನಂಬಿರದ ಪತಿಗೂ ಇದನ್ನೆಲ್ಲ ನೋಡುತ್ತಿದ್ದ ಹಾಗೆ ನಿಧಾನಕ್ಕೆ ವಿಶ್ವಾಸ ಮೂಡತೊಡಗುತ್ತದೆ. ಅಘೋರಿ ಸನ್ಯಾಸಿಯನ್ನು ಸ್ವಾಗತಿಸುತ್ತಾ ನಾಯಕಿ ಗೀತೆಯೊಂದನ್ನು ಹಾಡುವ ಮತ್ತು ಅದನ್ನು ಆಕೆಯ ಪತಿರಾಯ ನೋಡುವ ಸನ್ನಿವೇಶದ ಚಿತ್ರೀಕರಣವನ್ನು ಬಾಲಣ್ಣನ ಅಭಿಮಾನ್ ಸ್ಟುಡಿಯೋ ಸೆಟ್ ನಲ್ಲಿ ಚಿತ್ರೀಕರಿಸಲಾಯಿತು. ಅಲ್ಲಿಗೆ ಭೇಟಿ ನೀಡಿದ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಚಿತ್ರದ ಬಗ್ಗೆ ತಂಡದವರು ಮಾತುಕತೆ ನಡೆಸಿದರು.
'ಇದು ಇಂದು ಚಿತ್ರದ ಮುಹೂರ್ತ ನಡೆದ ಬಳಿಕ ನಡೆಸುತ್ತಿರುವ ಪ್ರಥಮ ದೃಶ್ಯದ ಚಿತ್ರೀಕರಣವಾಗಿದ್ದು ಚಿತ್ರದ ನಾಯಕನಾಗಿ ಶ್ರವಂತ್ ಮತ್ತು ಆತನ ಪತ್ನಿಯಾಗಿ ಪ್ರಿಯಾಂಕ ರಾವ್ ನಟಿಸುತ್ತಿದ್ದಾರೆಂದು' ನವ ನಿರ್ದೇಶಕ ರಾಘವೇಂದ್ರ ಗೊಲ್ಲಹಳ್ಳಿ ತಿಳಿಸಿದರು. ಆದರೆ ಚಿತ್ರವು ಮುಖ್ಯ ಕಥಾಪಾತ್ರವಾದ 'ನಾನಿ'ಯ ಸುತ್ತ ಗಿರಕಿ ಹೊಡೆಯಲಿದ್ದು ನಾನಿಯಾಗಿ ಬಣ್ಣದ ಕೊಡೆ ಚಿತ್ರದ ಖ್ಯಾತಿಯ ಬಾಲನಟಿ ಬೇಬಿ ಸುಹಾಸಿನಿ ನಟಿಸುತ್ತಿರುವುದಾಗಿ ಹೇಳಿದರು. 30 ವರ್ಗಳ ಹಿಂದೆ ಗುಜರಾತ್ ನಲ್ಲಿ ಹುಟ್ಟಿದ ಟೆಸ್ಟ್ ಟ್ಯೂಬ್ ಬೇಬಿಯೊಂದು ಅದರ 13ನೇ ವಯಸ್ಸಿನಲ್ಲಿ ದಾರುಣವಾಗಿ ಕೊಲೆಯಾಗುತ್ತದೆ. ಅದರ ಬಳಿಕ ಆ ಮಗುವಿದ್ದ ಬೃಹತ್ ಬಂಗಲೆಯನ್ನು ಹಾಗೆಯೇ ಬೀಗಹಾಕಿದ್ದರು. ಅದಷ್ಟು ನೈಜ ಕತೆಯಾಗಿದ್ದರೆ, ಅಲ್ಲಿ ನಾನಿ ದೆವ್ವವಾಗಿ ಸುತ್ತಾಡುತ್ತಾಳೆಂಬುದು ಸ್ಥಳೀಯರ ನಂಬಿಕೆಯಾಗಿತ್ತು. ಇದೀಗ ಚಿತ್ರಕ್ಕಾಗಿ 17 ವರ್ಷಗಳ ಬಳಿಕ ಗುಜರಾತ್ ನ ಆ ಮನೆಯ ಬಾಗಿಲನ್ನು ತೆರೆದು ಚಿತ್ರೀಕರಣ ನಡೆಸುವ ಸಾಹಸಕ್ಕೆ ಚಿತ್ರತಂಡ ಕೈ ಹಾಕಿದೆ. ಅದೇ ರೀತಿ ಚಿತ್ರಕ್ಕೆ ಬೇಕಾಗಿ ಚಿಕ್ಕಮಗಳೂರಿನ ಹಳೆಯ ಬ್ರಿಟಿಷ್ ಪ್ಯಾಲೇಸ್ ಒಂದರಲ್ಲಿಯೂ ಚಿತ್ರೀಕರಣ ನಡೆಸಲಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ನಾನಿಯ ತಂದೆ ತಾಯಿಯ ಪಾತ್ರದಲ್ಲಿ ಸುಹಾಸಿನಿ ಮಣಿರತ್ನಂ ಮತ್ತು ತಂದೆಯಾಗಿ ಜೈಜಗದೀಶ್ ನಟಿಸುತ್ತಿರುವುದು ವಿಶೇಷ. ಅಂದಹಾಗೆ ಬಂಧನದ ಜೋಡಿ ಇಲ್ಲಿ ಮತ್ತೆ ಒಂದಾಗುತ್ತಿದೆ. ಸಕಲೇಶಪುರದಲ್ಲೊಂದು ಕಡೆ 500ಜನ ಡ್ಯಾನ್ಸರ್ಸ್ ನ ಬಳಸಿಕೊಂಡು ಬೃಹತ್ ಶಿವನ ವಿಗ್ರಹದೆದುರು ನರ್ತಿಸುವ ಸಂದರ್ಭವನ್ನೂ ಮುಂದಿನ ಹಾಡೊಂದರಲ್ಲಿ ಬಳಸಿಕೊಳ್ಳಲಾಗುವುದಂತೆ. ಇದಕ್ಕಾಗಿ ಒಂದು ವಾರಗಳ ಕಾಲ ತ್ರಿಭುವನ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ತೊಡಗಲಿದ್ದು ಸೆಲಿಬ್ರಿಟಿಯೊಬ್ಬರು ಮುಖ್ಯ ನೃತ್ಯಗಾರರಾಗಿ ಕಾಣಿಸಲಿದ್ದಾರೆಂದರು. ಅಗೋರಿಯಾಗಿ ನಟಿಸುತ್ತಿರುವ ರಮೇಶ್ ಪಂಡಿತ್ ಮಾತನಾಡಿ ತಾನು ಹಿಮಾಲಯದ ತಪ್ಪಲಿನಿಂದ ಬರುವ ಮಂತ್ರವಾದಿ ಎಂದು ನಕ್ಕರು. ನಿರ್ಮಾಪಕ ರಮೇಶ್ ಕುಮಾರ್ ಜೈನ್ ಮೂಲತಃ ಗುಜರಾತ್ ನವರಾಗಿದ್ದು ಅವರೇ ಚಿತ್ರಕ್ಕೆ ಕತೆ ನೀಡಿದ್ದಾರೆ. ಮನೀಶ್ ಚಿತ್ರದಲ್ಲಿ ಸಿವಿಲ್ ಇಂಜಿನಿಯರಾಗಿದ್ದು, ಪ್ರಿಯಾಂಕರಾವ್ ತಮ್ಮ ಪಾತ್ರದ ಹೆಸರು ಮಂತ್ರ ಎಂದು ಹೇಳಿಕೊಂಡರು. ಚಿತ್ರಕ್ಕೆ ಎಂ.ಎಸ್ ತ್ಯಾಗರಾಜ್ ಸಂಗೀತ ನೀಡುತ್ತಿದ್ದು ನೆಲಮನೆ ರಾಘವೇಂದ್ರ ಸಾಹಿತ್ಯ ಬರೆದಿದ್ದಾರೆ. ಗುಂಡ್ಲು ಪೇಟೆ ಸುರೇಶ್ ಛಾಯಾಗ್ರಹಣವಿದೆ.