From the earlier FilmySphere, kept as published on 2014-11-14. It has not been updated.
Shivrajkumar releases audio CD of Khushi Khushi agi movie
ಶಿವಣ್ಣನಿಂದ 'ಖುಷಿಖುಷಿಯಾಗಿ' ಸೀಡಿ ಬಿಡುಗಡೆ
ಗಣೇಶ್ ಮತ್ತು ಅಮೂಲ್ಯ ಜೋಡಿಯಾಗಿ ನಟಿಸಿರುವ ಖುಷಿಖುಷಿಯಾಗಿ ಚಿತ್ರದ ಸೀಡಿ ಬಿಡುಗಡೆಗೆ ತಾನು ಖುಷಿಖುಷಿಯಾಗಿ ಬಂದಿರುವುದಾಗಿ ಹೇಳಿದ ಶಿವಣ್ಣ, ಗಣೇಶ ನನಗೆ ಉದಯ ಟೀವಿ ಕಾಲದಿಂದಲೇ ಇಷ್ಟವಾಗಿದ್ದರು ಎಂದರು. ಅದರಲ್ಲೂ ಗಣೇಶ ಮತ್ತು ಉಪ್ಪಿಯೊಂದಿಗೆ ಒಂದು ಬಾರಿ ನಡೆಸಿದ ರೈಲ್ವೇ ಪಯಣದ ಆತ್ಮೀಯ ಸಂದರ್ಭವನ್ನು ಎಂದೂ ಮರೆಯಲಾಗದು ಎಂದರು.
ಯೋಗಿ ಜಿ ರಾಜ್ ನಿರ್ದೇಶಿಸಿರುವ ಖುಷಿಖುಷಿಯಾಗಿ ಅವರಿಗೆ ಪ್ರಥಮ ಚಿತ್ರ. ಆದರೆ ಕಾಸ್ಟ್ಯೂಮ್ ಡಿಸೈನರಾಗಿ, ಸಹಾಯಕ ನಿರ್ದೇಶಕರಾಗಿ ಅವರನ್ನು ಚಿತ್ರೋದ್ಯಮದಲ್ಲಿ ಎಲ್ಲರೂ ಬಲ್ಲವರೇ. ನಾಯಕಿ ಅಮೂಲ್ಯ ತಮ್ಮದು ಕಲ್ಲರಳಿ ಹೂವಾಗಿ ಚಿತ್ರದ ಕಾಲದಿಂದಲೇ ಇರುವ ಸ್ನೇಹ ಎಂದರೆ, ಕೊರಿಯಾಗ್ರಫರ್ ಹರ್ಷ 'ನಮ್ಮದು ಶಾಲಾ ಕಾಲೇಜಿನಿಂದಲೇ ಬೆಳೆದು ಬಂದ ನಂಟು' ಎಂದರು. ಶಿವಣ್ಣನಲ್ಲಿ ಆತನೊಬ್ಬ ಭಾರತದ ಶ್ರೇಷ್ಠ ಛಾಯಾಗ್ರಾಹಕನಾಗುವ ನಂಬಿಕೆ ಮೂಡಿಸಿರುವ ಛಾಯಾಗ್ರಾಹಕ ಶೀಶ ಕುದುವಳ್ಳಿ ಮಾತನಾಡುತ್ತಾ 'ಟೋಪಿವಾಲ, ಬಹದ್ದೂರ್ ಬಳಿಕ ಇದು ನನ್ನ ಮೂರನೇ ಚಿತ್ರ' ಎಂದರು. ಚಿತ್ರದ ಮತ್ತೋರ್ವ ನಾಯಕಿ ನಂದಿನಿ ರೈ ಆಂಧ್ರದ ಹುಡುಗಿಯಾಗಿದ್ದು, ಸಮಾರಂಭದಲ್ಲಿ ಪ್ರದರ್ಶಿಸಿದ ಹಾಡುಗಳನ್ನು ನೋಡಿದ ಮೇಲೆ 'ಅಮೂಲ್ಯ ನಟಿಸಿರುವ ಹಾಡನ್ನು ಇಷ್ಟಪಟ್ಟಿದ್ದೇನೆ' ಎಂದು ಮಹಾಮನಸ್ಕತೆ ಪ್ರದರ್ಶಿಸಿದರು. ಸಾಧುಕೋಕಿಲ ಮಾತನಾಡಿ 'ನಾನು ಗಣೇಶ್ ಚಿತ್ರಗಳಲ್ಲಿ ಆಸ್ಥಾನ ವಿದೂಷಕನಂತೆ ಪರ್ಮನೆಂಟಾಗಿ ನಟಿಸುತ್ತಿದ್ದೇನೆ' ಎಂದು ನಕ್ಕರು. 'ಆದರೆ ಇದರಲ್ಲಿ ಸಾಧುಕೋಕಿಲಾರದ್ದು ಕತೆಯಲ್ಲಿ ತಿರುವು ಕೊಡುವಂಥ ಮುಖ್ಯ ಪಾತ್ರ' ಎಂದ ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶಕ ಯೋಗಿ ನನಗೆ 12 ವರ್ಷಗಳ ಸ್ನೇಹಿತನೆಂದು ನೆನಪಿಸಿಕೊಂಡರು. ಆಂಧ್ರದಿಂದ ಬಂದ ಚಿತ್ರದ ಸಂಗೀತ ನಿರ್ದೇಶಕ ಅನೂಪ್ 'ಇದು ನನ್ನ ಮೊದಲ ಕರ್ನಾಟಕ ಭೇಟಿ' ಎಂದರು. ನಿರ್ದೇಶಕ ಯೋಗಿ ತಾವು ಶಿವಣ್ಣನಿಗೆ ಬಾಲ್ಯದಿಂದಲೇ ಫ್ಯಾನ್ ಆಗಿದ್ದು ಅವರ ಫೊಟೋ ಕತ್ತರಿಸಿ ತೆಗೆದಿಡುತ್ತಿದ್ದುದನ್ನು ಹೇಳಿ ಅವರ ಮೂಲಕ ಇಂದು ತಮ್ಮ ನಿರ್ದೇಶನದ ಚಿತ್ರದ ಸೀಡಿ ಬಿಡುಗಡೆಯಾಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು. ಗಣೇಶ್ ಚಿತ್ರದ ಆಡಿಯೋ ಮೊದಲ ಬಾರಿಗೆ ತಮ್ಮ ಕ್ಯಾಸೆಟ್ ನಲ್ಲಿ ಬಿಡುಗಡೆಯಾಗುತ್ತಿರುವ ಸಂತಸವನ್ನು ಲಹರಿ ವೇಲು ಹಂಚಿಕೊಂಡರು. ಚಿತ್ರದ ನಿರ್ಮಾಪಕ ಎ.ಹರಿಪ್ರಸಾದ್ ರಾವ್ ತಂಡಕ್ಕೆ ಶುಭ ಕೋರಿದರು.