Skip to content
FilmySphere

From the earlier FilmySphere, kept as published on 2014-11-13. It has not been updated.

Namagaagi & Radhika Kumarswamy Birthday

ಈ ಜನ್ಮದಿನ 'ನಮಗಾಗಿ'

ಪ್ರತಿ ಜನ್ಮದಿನದಲ್ಲಿಯೂ ಗುಟ್ಟಾಗಿ ಅನಾಥರಿಗೆ ಸಹಾಯಹಸ್ತ ನೀಡುತ್ತಿದ್ದ ರಾಧಿಕಾರನ್ನು ಈ ಬಾರಿ ನೇರ ಅನಾಥಾಶ್ರಮಕ್ಕೇ ಕರೆದುತಂದ ಕೀರ್ತಿ ನಿರ್ದೇಶಕ ರಘುರಾಮ್ ಗೆ ಸಲ್ಲುತ್ತದೆ. ಈ ಜನ್ಮದಿನವನ್ನು 'ನಮಗಾಗಿ' ಮೀಸಲಿಡಿ ಎಂದು ಅವರು ಕೇಳಿಕೊಂಡಿದ್ದೇ ಇದಕ್ಕೆ ಕಾರಣವಾಗಿತ್ತು. ಅಂದಹಾಗೆ ನಮಗಾಗಿ ಎಂಬುದು ರಾಧಿಕಾ ಮತ್ತು ವಿಜಯರಾಘವೇಂದ್ರ ಜೋಡಿಯಾಗಿ ನಟಿಸುತ್ತಿರುವ ಹೊಸ ಚಿತ್ರ.

ನಿನಗಾಗಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಲೇ ದಾಖಲೆಯ ಯಶಸ್ಸಿಗೆ ನಾಯಕಿಯಾದ ಕೀರ್ತಿ ರಾಧಿಕಾರದ್ದು. ಅದರ ಬಳಿಕ ವಿಜಯ ರಾಘವೇಂದ್ರರ ಜೊತೆ ಸೇರಿ ಮೂರು ನಾಲ್ಕು ಚಿತ್ರಗಳು ತೆರೆಕಂಡವು. ಅದರಲ್ಲೆಲ್ಲಾ ಪ್ರೇಮಿಗಳಾಗಿ ಗಮನ ಸೆಳೆದಿದ್ದ ಈ ಜೋಡಿ ಇದೀಗ ಪ್ರಬುದ್ಧ ಗಂಡಹೆಂಡತಿಯಾಗಿ ನಟಿಸುತ್ತಿದ್ದಾರೆ. ಇದೊಂದು ಐಟಿಬಿಟಿ ದಂಪತಿಯ ಕತೆ. ಕತೆ ಕೇಳಿದಾಗ ಕೊನೆಯಲ್ಲಿ ನನಗೆ ಅಳು ಬಂದಿತ್ತು ಎಂದರು ರಾಧಿಕಾ. ಸಂಗೀತ ನಿರ್ದೇಶಕ ಹರಿಕೃಷ್ಣರ ಜೊತೆಗೆ ಹೋಗಿ ಕತೆ ಹೇಳಿದ್ದೆ. ಚಿತ್ರಕ್ಕೆ ಹರಿಕೃಷ್ಣರೇ ಸಂಗೀತ ನೀಡಲಿದ್ದಾರೆ. ಚಿತ್ರದಲ್ಲಿ ರಾಧಿಕಾ ಅನಾಥೆಯಾಗಿರುತ್ತಾರೆ. ಹಾಗಾಗಿ ಅನಾಥಾಶ್ರಮದಲ್ಲಿನ ಚಿತ್ರೀಕರಣವನ್ನು ಅವರ ಜನ್ಮ ದಿನದಲ್ಲೇ ಮಾಡುವ ಯೋಜನೆ ಹಾಕಿದೆವು ಎಂದರು ನಿರ್ದೇಶಕ ರಘು. ನಟಿ ಸುಮಿತ್ರಾ ಬಾಬು, ಉಗ್ರಂ ಖ್ಯಾತಿಯ ಖಳನಟ ಮಂಜು, ಛಾಯಾಗ್ರಾಹಕ ಜಗದೀಶ್ ವಾಲಿ ಚಿತ್ರದ ನಿರ್ಮಾಪಕ ಮೈಸೂರು ಕೃಷ್ಣ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರದಲ್ಲಿ ರಂಗಾಯಣ ರಘು, ಬುಲೆಟ್ ಪ್ರಕಾಶ್ ಮೊದಲಾದವರು ನಟಿಸಲಿರುವುದಾಗಿ ನಿರ್ದೇಶಕರು ತಿಳಿಸಿದರು.