Skip to content
FilmySphere

From the earlier FilmySphere, kept as published on 2014-11-12. It has not been updated.

Suddi Film Press Meet

ಮಹಿಳಾ ದೌರ್ಜನ್ಯದ ವಿರುದ್ಧ 'ಶುದ್ಧಿ' ಚಿತ್ರ

ಶುದ್ಧಿ ಚಿತ್ರದ ಪ್ರಥಮ ಪತ್ರಿಕಾಗೋಷ್ಠಿ ಸಿಟಡೆಲ್ ಹೋಟೆಲ್ ನಲ್ಲಿ ನಡೆಯಿತು. ಹೊಸಬರ ತಂಡವೊಂದಕ್ಕೆ ಅವಕಾಶ ನೀಡಿ ನಿರ್ಮಾಪಕರಾಗಿರುವ ಮಾದೇಶ್ ತಮಗೂ ಇದು ಪ್ರಥಮ ಅನುಭವ ಎಂದರು. ನಿರ್ದೇಶಕರು ಇಂಥದೇ ತಂಡವನ್ನಿಟ್ಟುಕೊಂಡು ತೆಗೆದಿದ್ದ ಕಿರುಚಿತ್ರವನ್ನು ಕಂಡ ಮೇಲೆ ಅವರು ಹೇಳಿದ ಕತೆಯನ್ನು ಅಷ್ಟೇ ಸೊಗಸಾಗಿ ತೆರೆಯ ಮೇಲೆ ತರುವರೆಂಬ ನಿರೀಕ್ಷೆ ತಮಗೆ ಬಂದಿತೆಂದು ಅವರು ಹೇಳಿದರು. ನಿರ್ದೇಶಕ ಆದರ್ಶ್ ಆಸ್ ಎಂಜಲ್ಸ್ ನಲ್ಲಿ ಕಿರುಚಿತ್ರ ತರಬೇತಿ ಮಾಡಿ ಬಂದವರಾಗಿದ್ದು ತಮ್ಮ ಚಿತ್ರದಲ್ಲಿಯೂ ಅಲ್ಲಿನ ಯುವ ಕಲಾವಿದರನ್ನು ಬಳಸಿಕೊಂಡಿದ್ದಾರೆ. ಮಹಿಳಾ ದೌರ್ಜನ್ಯದ ವಿರುದ್ಧ ಪ್ರತಿಭಟನೆ ದನಿಯಿರುವ ಚಿತ್ರವಿದೆಂದು ಹೇಳಿದ ಆದರ್ಶ್ ಚಿತ್ರವನ್ನು ಮೂರು ಟ್ರ್ಯಾಕ್ ನಲ್ಲಿ ಹೇಳಲಿದ್ದಾರಂತೆ. ಒಂದು ಟ್ರ್ಯಾಕ್ ನಲ್ಲಿ ನಾಯಕಿಯರಾದ ನಿವೇದಿತಾ ಮತ್ತು ಅಮೃತಾ ಪತ್ರಕರ್ತೆಯರಾಗಿ ನಟಿಸಲಿದ್ದು, ಮತ್ತೊಂದು ಟ್ರ್ಯಾಕ್ ನಲ್ಲಿ ಮತ್ತೋರ್ವ ನಾಯಕಿ ಲಾರೆನ್ ನಟಿಸಲಿದ್ದಾರಂತೆ. ಮೂರನೆಯ ಟ್ರ್ಯಾಕ್ ನಲ್ಲಿ ಮಹಾಪರ್ವ ಖ್ಯಾತಿಯ ಶಶಾಂಕ್ ಓರ್ವ ಇನ್ವೆಸ್ಟಿಗೇಶನ್ ಆಫೀಸರ್ ಆಗಿ ನಟಿಸುತ್ತಿದ್ದಾರಂತೆ. ಮುಕ್ತ ಖ್ಯಾತಿಯ ಅಜೇಯರಾಜ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಆ್ಯಂಡ್ರೋ ಛಾಯಾಗ್ರಾಹಕರಾಗಿದ್ದಾರೆ. ಸಾಯಿ ಕಿರಣ್ ಸಂಗೀತ ನಿರ್ದೇಶನ ನೀಡಿದ್ದು ಥ್ರಿಲ್ಲರ್ ಚಿತ್ರವಾಗಿರುವುದರಿಂದ ಹಾಡುಗಳಿಲ್ಲ, ಬರೇ ಬ್ಯಾಕ್ ಗ್ರೌಂಡ್ ಸ್ಕೋರ್ ಮಾತ್ರ ನನ್ನ ಕೆಲಸ' ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರಕ್ಕೆ ಸಂಬಂಧ ಪಟ್ಟವರೆಲ್ಲ ಉಪಸ್ಥಿತರಿದ್ದರು.