Skip to content
FilmySphere

From the earlier FilmySphere, kept as published on 2014-09-09. It has not been updated.

power star Success Meet

ಪವರ್ ಸ್ಟಾರ್ ಗೆ ದಾಖಲೆಯ ಸ್ವಾಗತ

ಪುನೀತ್ ರಾಜಕುಮಾರ್ ನಾಯಕನಾಗಿ ನಟಿಸಿದ ಪವರ್ ಸ್ಟಾರ್ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅದರ ಖುಷಿಯಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ ಅಪ್ಪು ಜೊತೆಗೆ ತಂಡದ ಬಹುತೇಕರು ಹಾಜರಿದ್ದು ಸಂಭ್ರಮ ಹಂಚಿಕೊಂಡರು.

ಚಿತ್ರವನ್ನು ಕರ್ನಾಟಕದಾದ್ಯಂತ ಹಿಂದೆಂದೂ ಬಿಡುಗಡೆಯಾಗದಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಿರುವ ವಿತರಕ ನಾಗಪ್ರಸಾದ್ ಮಾತನಾಡಿ 'ಚಿತ್ರ ಒಂದೇ ವಾರದಲ್ಲಿ ಒಟ್ಟು ಬಜೆಟ್ ನ 70% ದಷ್ಟು ಹಣವನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಿಪೀಟ್ ಆಡಿಯನ್ಸ್ ಸೇರಿ ಒಟ್ಟು 20ಲಕ್ಷ ಪ್ರೇಕ್ಷಕರು ಪ್ರಥಮ ವಾರದಲ್ಲೇ ಚಿತ್ರ ನೋಡಿದ್ದಾರೆ ಎಂಬುದು ಸದ್ಯದ ಮಟ್ಟಿಗೆ ದಾಖಲೆಯ ವಿಚಾರ. ಸದ್ಯದಲ್ಲೇ ಚಿತ್ರ ನಿವ್ವಳ ಲಾಭ ತರುವ ನಿರೀಕ್ಷೆಯಿದೆ' ಎಂದರು. 'ಕೆಲವು ವರ್ಷಗಳ ಹಿಂದೆ ನಾನು ಪುನೀತ್ ಸಿನೆಮಾ ನಿರ್ಮಾಣ ಮಾಡುವ ಯೋಜನೆಯೊಂದಿಗೆ ಉದ್ಯಮಕ್ಕೆ ಬಂದಿದ್ದೆ. ಈಗ ಅವರದೇ ಚಿತ್ರವನ್ನು ವಿತರಣೆ ಮಾಡುವುದರೊಂದಿಗೆ ಆಸೆ ಒಂದು ಹಂತಕ್ಕೆ ನೆರವೇರಿದಂತಾಗಿದೆ ಎಂದರು. ಸಾಮಾನ್ಯ ವಾಡಿಕೆಗೆ ವಿರುದ್ಧವಾಗಿ ನಿರೂಪಕಿ ಪ್ರಥಮದಲ್ಲೇ ಮೈಕನ್ನು ಪುನೀತ್ ಕೈಗೆ ನೀಡಿದಾಗ ಅವರು ಅಚ್ಚರಿಗೊಂಡರೂ ಕೂಡ ಸಾವಾರಿಸಿ ಪವರ್ ಫುಲ್ ಮಾತುಗಳನ್ನಾಡಿದರು. ಮೂಲ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದ ಸೀನು ವೈಟ್ಲರವರ ಅದ್ಬುತವಾದ ಚಿತ್ರಕತೆಯೇ ಇಂದು ಚಿತ್ರ ಯಶಸ್ವಿಯಾಗಲು ಮುಖ್ಯ ಕಾರಣ ಎಂದರು. ಉಳಿದಂತೆ ನಿರ್ದೇಶಕ ಮಾದೇಶ್,ನಿರ್ಮಾಪಕರು, ಸಂಗೀತ ನಿರ್ದೇಶಕರು ಸೇರಿದಂತೆ ತಂಡದ ಪ್ರತಿಯೊಬ್ಬರ ಹೆಸರು ಹೇಳಿ ಅವರೆಲ್ಲರೂ ಚೆನ್ನಾಗಿ ನಟಿಸಿರುವುದರಿಂದ ಚಿತ್ರ ಚೆನ್ನಾಗಿ ಮೂಡಿದೆ ಎಂದರು. ಚಿತ್ರದಲ್ಲಿ ಪುನೀತ್ ನ ಮೇಲಧಿಕಾರಿಯ ಪಾತ್ರದಲ್ಲಿ ನಟಿಸಿದ್ದ ಶಶಿಕುಮಾರ್ ಮಾತನಾಡುತ್ತಾ 'ನಾನು, ನಿರ್ದೇಶಕ ಮಾದೇಶ್ ಕೆವಿ ರಾಜುರ ಶಿಷ್ಯ ವರ್ಗದಲ್ಲಿ ಸೇರುತ್ತೇವೆ. ಚಿತ್ರದಲ್ಲಿ ಪುನೀತ್ ಜೊತೆಗೆ ನಟಿಸುವುದರೊಂದಿಗೆ ಡಾ.ರಾಜಕುಮಾರ್ ರ ಮೂವರು ಮಕ್ಕಳೊಂದಿಗೂ ನಟಿಸಿದಂತಾಗಿದೆ' ಎಂದರು. ಸಾಹಸ ನಿರ್ದೇಶಕ ರವಿ ವರ್ಮ 'ಅಪ್ಪು ಸರ್ ಮತ್ತು ನಿರ್ದೇಶಕ ಮಾದೇಶ್ ಜೊತೆಗೆ ಇದು ನನ್ನ ಮೂರನೇ ಕಾಂಬಿನೇಶನ್ ಚಿತ್ರ' ಎಂದರು. ಚಿತ್ರದಲ್ಲಿ ಹಾಸ್ಯನಟನಾಗಿ ಕಾಣಿಸಿರುವ ರಂಗಾಯಣ ರಘು, ಚಿತ್ರಕ್ಕೆ ಜನಪ್ರಿಯ ಸಾಹಿತ್ಯ ನೀಡಿರುವ ಕವಿರಾಜ್, ಹಾಡುಗಳ ಸೀಡಿಗಳನ್ನು ದಾಖಲೆಯ ಮಟ್ಟದಲ್ಲಿ ಮಾರಾಟ ಮಾಡಿರುವ ಲಹರಿ ಸಂಸ್ಥೆಯ ವೇಲು, ಮನೋಹರ ನಾಯ್ಡು, ಚಿತ್ರದ ನಿರ್ಮಾಪಕರಲ್ಲೋರ್ವರಾದ ಪ್ರವೀಣ್ ಮೊದಲಾದವರು ವೇದಿಕೆಯಲ್ಲಿದ್ದು ಮಾತನಾಡಿ ಸಂಭ್ರಮ ಹಂಚಿಕೊಂಡರು. ಖ್ಯಾತ ನಿರ್ಮಾಪಕರಾದ ಎನ್ ಎಂ ಸುರೇಶ್, ಉಮೇಶ್ ಬಣಕಾರ್, ನಟ ಜೈಜಗದೀಶ್, ಶರತ್ ಲೋಹಿತಾಶ್ವ, ಮೊದಲಾದ ಗಣ್ಯರು ಸಮಾರಂಭದ ಭಾಗವಾಗಿದ್ದರು.