From the earlier FilmySphere, kept as published on 2014-11-11. It has not been updated.
Abhimanyu Success Meet
ಜನಮನಗೆದ್ದ ಅಭಿಮನ್ಯು
ಮೂರುಭಾಷೆಗಳಲ್ಲಿ ಚಿತ್ರವೊಂದಕ್ಕೆ ಕತೆ, ಚಿತ್ರಕತೆ ಬರೆದು ನಿರ್ದೇಶಿಸಿ ವಿತರಣೆಯನ್ನೂ ಮಾಡಿದ ಬಳಿಕ ಚಿತ್ರದ ಪ್ರತಿಕ್ರಿಯೆ ಏನಿತ್ತೆಂಬುದನ್ನು ತಿಳಿಸಲು ಮಾಧ್ಯಮದ ಮುಂದೆ ಬಂದಿದ್ದರು ಅರ್ಜುನ್ ಸರ್ಜಾ. ಚಿತ್ರ ಎಷ್ಟುಕೋಟಿ ಖರ್ಚು ಮಾಡಿತು ಎಂಬುದಕ್ಕಿಂತ ಎಲ್ಲರ ಮನಸ್ಸಿನೊಳಗೂ ಸ್ಪರ್ಶ ಮಾಡಿತು ಎಂಬುದೇ ನಾನು ನಿಮಗೆ ತಿಳಿಸಲಿರುವ ಪ್ರಮುಖ ಸಂಗತಿ ಎಂದರು ಅರ್ಜುನ್.
ಚಿತ್ರವನ್ನು ನೋಡಿದ ಹಲವರು ನಾವು ಬಡ ಮಕ್ಕಳನ್ನು ದತ್ತು ತೆಗೆದುಕೊಂಡು ಓದಿಸಲು ತಯಾರಿರುವುದಾಗಿ ಹೇಳಿದ್ದಾರೆ. ನಾನು ನಟಿಸಿದ ಅಥವಾ ನಿರ್ದೇಶಿಸಿದ ಚಿತ್ರವೊಂದಕ್ಕೆ ಜನತೆ ಇಷ್ಟೊಂದು ಭಾವನಾತ್ಮಕವಾಗಿ ಸ್ಪಂದಿಸುತ್ತಿರುವುದು ಇದೇ ಪ್ರಥಮ. ಮಾಧ್ಯಮಗಳು ಕೂಡ ನನಗೆ ಬೆಂಬಲಿಸಿವೆ ಎಂಬುದಕ್ಕಿಂತ ನಾನು ಮುಂದಿಟ್ಟಿರುವ ಕಾನ್ಸೆಪ್ಟ್ ಗೆ ಮೆಚ್ಚುಗೆ ಸೂಚಿಸಿದೆಯೆಂಬುದೇ ನನಗೆ ಸಿಕ್ಕ ಗೆಲುವು ಎಂದುಕೊಳ್ಳುತ್ತೇನೆ. ಆಂಧ್ರದ ರಾಜಕಾರಣಿಗಳು ನನ್ನ ಚಿತ್ರದ ವಿಚಾರವನ್ನು ಉಲ್ಲೇಖಿಸಿ ಚರ್ಚೆ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಕೆಲವೇ ದಿನಗಳ ಹಿಂದೆ ಪುಟ್ಟ ಮಗುವೊಂದು ತರಗತಿಯಿಂದ ಸತತ ನಾಲ್ಕು ದಿನಗಳ ಕಾಲ ಬಹಿಷ್ಕರಿಸಲ್ಪಟ್ಟಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿರುವುದು ಚಿತ್ರದಲ್ಲಿರುವ ವಾಸ್ತವಿಕತೆಗೆ ಕನ್ನಡಿ ಹಿಡಿಯುತ್ತಿರುವ ಸಂಗತಿಗಳಾಗಿದೆ ಎಂದರು ಅರ್ಜುನ್. ಅಬ್ದುಲ್ ಕಲಾಂರ ಆತ್ಮಕತೆ ಓದುತ್ತಿರಬೇಕಾದರೆ ಅದರಲ್ಲಿ ಆಂಧ್ರದ ಶಾಲಾ ವಿದ್ಯಾರ್ಥಿ ತಾನು ವಿದೇಶದಲ್ಲಿ ಕಲಿಯುವ ಬದಲು ಡೆವಲಪ್ ಡ್ ಇಂಡಿಯಾನಲ್ಲಿ ಕಲಿಯಬೇಕೆಂಬ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾರೆ. ಆಗ ಡೆವಲಪ್ಡ್ ಇಂಡಿಯಾವನ್ನು ನಾವು ಯಾವಾಗ ನಿರ್ಮಾಣ ಮಾಡುವುದೆಂಬ ಪ್ರಶ್ನೆಯನ್ನು ಕಲಾಂ ಕೇಳುತ್ತಾರೆ. ಅದೇ ಸ್ಪೂರ್ತಿಯಿಂದ ಇಂಥದೊಂದು ವಿಚಾರದಲ್ಲಿ ಚಿತ್ರ ನಾನು ಮಾಡಿದೆ. ಹಾಗಾಗಿ ಚಿತ್ರದ ಬಗ್ಗೆ ನಾನು ಕಲಾಂ ಸಾಹೇಬರಿಗೂ ತಿಳಿಸಲು ಪ್ರಯತ್ನಿಸಿದೆ. ಅವರ ಕಡೆಯಿಂದ ಆಲ್ ದಿ ಬೆಸ್ಟ್ ಎಂಬ ಸಂದೇಶ ಬಂದಿದೆ. ಅದೇ ರೀತಿ ನಮ್ಮ ಮುಖ್ಯಮಂತ್ರಿಗಳು ಮತ್ತು ಪ್ರಧಾನಮಂತ್ರಿ ಮೋದಿಯವರಿಗೂ ಚಿತ್ರವನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಅರ್ಜುನ್ ತಿಳಿಸಿದರು. ಚಿತ್ರದ ಕೆಲವೊಂದು ಕಡೆಗಳಲ್ಲಿ ಲಿಪ್ ಸಿಂಕಾಗದ ಹಾಗೆ ಕಾಣಿಸುತ್ತಿರುವುದೇಕೆ ಎಂದು ಅವರಲ್ಲಿ ಪ್ರಶ್ನಿಸಿದಾಗ ಕೆಲವೆಡೆಗಳಲ್ಲಿ ಪರಭಾಷಾ ಕಲಾವಿದರು ಕನ್ನಡ ಮಾತನಾಡುವಾಗ ಭಾವ ಸರಿಯಾಗಿ ಹೊಮ್ಮುತ್ತಿರಲಿಲ್ಲ. ಅದಕ್ಕಾಗಿ ಅವರಲ್ಲಿ ಅವರಿಗೆ ಕಂಫರ್ಟ್ ಅನಿಸುವ ಭಾಷೆಯನ್ನೇ ಮಾತನಾಡಲು ಹೇಳಿ ಬಳಿಕ ಕನ್ನಡದಿಂದ ಡಬ್ ಮಾಡಿಸಿರುವುದಾಗಿ ತಿಳಿಸಿದರು. ಚಿತ್ರದಲ್ಲಿ ಪ್ರಮುಖ ಪಾತ್ರವಾಗಿ ಕಾಣಿಸಿರುವ ಬಾಲನಟಿ ಯುವಿನಾ ಕೂಡ ಚಿತ್ರದ ಯಶಸ್ಸಿನ ಖುಷಿಯಲ್ಲಿ ಪಾಲ್ಗೊಂಡು ತನ್ನ ಮುದ್ದಾದ ಮಾತು ಮತ್ತು ವರ್ತನೆಗಳಿಂದ ಗಮನ ಸೆಳೆದಳು. ಕೊನೆಯ ಕ್ಷಣದಲ್ಲಿ ಹಾಜರಾದ ನಟ ಬೀರಾದಾರ್ ಕೂಡ ಸಂಭ್ರಮದ ಮಾತುಗಳನ್ನಾಡಿದರು. ಪ್ರಸ್ತುತ ಚಿತ್ರ ಎಷ್ಟು ಹಣ ಸಂಪಾದಿಸುತ್ತದೆ ಎಂಬುದಕ್ಕಿಂತ ಎಷ್ಟು ಮಂದಿಯ ಮನ ಸೆಳೆಯುತ್ತದೆ ಎಂಬುದು ನನಗೆ ಮುಖ್ಯ. ಹಾಗಾಗಿ ಚಿತ್ರವನ್ನು ತೀರಾ ಕಮರ್ಷಿಯಲ್ ಮಾಡಲು ಹೋಗಿಲ್ಲ. ಆದರೆ ಆ್ಯಕ್ಷನ್ ಇಮೇಜ್ ನನ್ನದಾಗಿರುವುದರಿಂದ ಹೊಡೆದಾಟಗಳಿಗೆ ಕೊರತೆ ಮಾಡಿಲ್ಲ ಎಂದು ಮಾತು ಮುಗಿಸಿದರು ಆ್ಯಕ್ಷನ್ ಕಿಂಗ್.