From the earlier FilmySphere, kept as published on 2014-11-11. It has not been updated.
Master Mind Kannada movie Audio Released
'ಮಾಸ್ಟರ್ ಮೈಂಡ್' ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ
ಮಾಸ್ಟರ್ ಮೈಂಡ್ ಚಿತ್ರದ ಹಾಡುಗಳ ಸೀಡಿ ಬಿಡುಗಡೆಯನ್ನು ಯಾವ ಮಾಸ್ಟರ್ ಮೈಂಡ್ ಉಪಯೋಗಿಸದೆ ಹೃದಯಸ್ಪರ್ಶಿಯಾಗಿ ಮಾಡಿ ಗಮನ ಸೆಳೆದರು ನಟ, ನಿರ್ದೇಶಕ ಮತ್ತು ನಿರ್ಮಾಪಕ ಕುಮಾರ್ ಗೋವಿಂದ್. ಯಾಕೆಂದರೆ ಅವರು ಚಿತ್ರದ ಸೀಡಿ ಬಿಡುಗಡೆಗೆ ಆಯ್ದುಕೊಂಡದ್ದು ಒಂದು ಮಕ್ಕಳ ಅನಾಥಾಶ್ರಮ.
ಚಾಮರಾಜ ಪೇಟೆಯ ಬಾಸ್ಕೋ ಮನೆ ಅನಾಥಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೀಡಿ ಬಿಡುಗಡೆಗೊಳಿಸಲು ಖುದ್ದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡಾ.ಬರಗೂರು ರಾಮಚಂದ್ರಪ್ಪ ಆಗಮಿಸಿದ್ದರು. ಕುಮಾರ್ ಗೋವಿಂದ್ ನನಗೆ ತುಂಬಾ ಆತ್ಮೀಯರು. ಅವರು ಇಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡ ಸದುದ್ದೇಶಕ್ಕೆ ಖುಷಿಯಾಗಿದ್ದೇನೆ. ಆದರೆ ಪ್ರಚಾರದ ಹೆಸರಲ್ಲಿ ವಿಕಾರಕ್ಕೆ ದಾಸರಾಗುವ ಹಲವರಿಗೆ ನಾನು ಒಂದು ಸೂಚನೆ ನೀಡಬಯಸುತ್ತೇನೆ. ಕೆಟ್ಟದಾಗಿ ಹಾಡು ಬರೆದು ಜನ ಅದನ್ನೇ ಬಯಸುತ್ತಾರೆ ಎಂದು ಹೇಳುವುದು ಸುಲಭ. ಆದರೆ ಹಾಗಂತ ಯಾವ ಜನರೂ ಯಾರ ಮನೆ ಮುಂದೆಯೂ ಧರಣಿ ಕುಳಿತ ಉದಾಹರಣೆಗಳಿಲ್ಲ. ಆದುದರಿಂದ ಈ ರೀತಿ ಒಳ್ಳೆಯದನ್ನೇ ಮಾಡುವ ಮೂಲಕ ಹೆಸರು ಮಾಡಿ ಎಂದು ಹಾರೈಸಿದರು. ಶ್ ಮೂಲಕ ಕುಮಾರ್ ಗೋವಿಂದ್ ನನ್ನ ಅನ್ನದಾತರಾದವರು ಎಂದು ಉಪೇಂದ್ರ ಮಾತು ಆರಂಭಿಸಬೇಕಾದರೆ ಕಣ್ಣು ತುಂಬಿಸಿಕೊಂಡ ಕುಮಾರ್ ಗೋವಿಂದ್ ತಕ್ಷಣ ಉಪ್ಪಿಯ ಬಳಿಸಾರಿ ಅಪ್ಪಿಕೊಂಡರು. ಆಶ್ರಮದ ಮಕ್ಕಳಲ್ಲಿ 'ನೀವು ಖಂಡಿತಾ ಅನಾಥರಲ್ಲ; ನಾವೇ ನಿಜವಾದ ಅನಾಥರು' ಎಂದು ಮಾತನಾಡಿದ ಉಪ್ಪಿ ಮಕ್ಕಳ ಅಪೇಕ್ಷೆ ಮೇರೆಗೆ ರಕ್ತಕಣ್ಣೀರು ಚಿತ್ರದ ಸಂಭಾಷಣೆಯನ್ನು ಹೇಳಿ ರಂಜಿಸಿದರು. ಸೀಡಿಗಳನ್ನು ಮಾರುಕಟ್ಟೆಗೆ ತರುತ್ತಿರುವ ಲಹರಿವೇಲು ಮಾತನಾಡುತ್ತಾ 'ಕುಮಾರ್ ಗೋವಿಂದ್ ಮತ್ತು ನಾನು ಮೂರು ದಶಕಗಳಿಂದ ಜಿಮ್ ಮೇಟ್ಸ್ ಆಗಿದ್ದೇವೆ. ನಾನು ಭೇಟಿಕೊಟ್ಟ ಸಾವಿರಾರು ಕಾರ್ಯಕ್ರಮಗಳಲ್ಲಿ ಇದು ಭಾವನಾತ್ಮಕವಾಗಿ ಎಂದಿಗೂ ನೆನಪಲ್ಲಿ ಉಳಿದುಕೊಳ್ಳುತ್ತದೆ ಎಂದರು. ಚಿತ್ರದ ಹಾಡುಗಳಿಗೆ ಸಂಗೀತ ನೀಡಿರುವ ಎಮ್.ಫಾಜಿಲ್ ಎಳೆಯ ಪ್ರತಿಭೆಯಾಗಿದ್ದು ಕುಮಾರ್ ಗೋವಿಂದ್ ಅವರಿಗೆ ಪ್ರಥಮ ಅವಕಾಶವನ್ನು ನೀಡಿದ್ದಾರೆ. ಅತಿಥಿಯಾಗಿ ಆಗಮಿಸಿದ್ದ ನಿರ್ಮಾಪಕ ಬಿಕೆ ಶ್ರೀನಿವಾಸ್ 'ನಾನು ಸಿಎಂರನ್ನು ಕರೆಸಿ ಈ ಹಿಂದೆ ಸೀಡಿ ಬಿಡುಗಡೆಗೊಳಿಸಿದ್ದು ಆಡಂಬರವಷ್ಟೇ, ಆದರೆ ನಿಜವಾದ ಆತ್ಮತೃಪ್ತಿ ಸಿಗುವ ಕಾರ್ಯಕ್ರಮವಿದು' ಎಂದು ಮನಸ್ಸು ತೆರೆದು ಹೇಳಿಕೊಂಡರು. ಚಿತ್ರದ ನಿರ್ದೇಶಕ ಕುಮಾರ್ ಗೋವಿಂದ್ ಮಾತನಾಡುತ್ತಾ ನನ್ನ ಮಗ ಕೂಡ ಮಾತನಾಡಲಾರ, ಕೇಳಿಸಿಕೊಳ್ಳಲಾರ. ಆತನ ತಂದೆಯಾಗಿ ನನಗೆ ನಿಜವಾದ ಅನಾಥತ್ವ ಏನೆಂಬುದು ಗೊತ್ತು. ಅದಕ್ಕಾಗಿಯೇ ಅನಾಥ ಮಕ್ಕಳ ಮುಂದೆ ಈ ಸಮಾರಂಭವನ್ನು ಸಮರ್ಪಿಸಿದ್ದೇನೆ. ಬಂದು ಸಹಕಾರ ನೀಡಿದ ಉಪ್ಪಿ, ಬರಗೂರು ರಾಮಚಂದ್ರಪ್ಪ, ಬೆಂಕೋಶ್ರೀ ಮತ್ತು ಮುಂಬೈನಿಂದಬಂದ ನಾಯಕಿ ಭಕ್ತಿ ಸೇರಿದಂತೆ ಎಲ್ಲರಿಗೂ ವಂದನೆಗಳು ಎಂದರು. ಚಿತ್ರವನ್ನು ಇದೇ ತಿಂಗಳ ಕೊನೆಗೆ ಅಥವಾ ಡಿಸೆಂಬರ್ ಆರಂಭದಲ್ಲೇ ತೆರೆಗೆ ತರುವ ಯೋಜನೆ ಹಾಕಿರುವುದಾಗಿ ತಿಳಿಸಿದರು. ಗಣ್ಯರ ಜೊತೆ ಅನಾಥಾಶ್ರಮದ ಮಕ್ಕಳು ಸೇರಿ ಸೀಡಿ ಬಿಡುಗಡೆಗೊಳಿಸದ ಬಳಿಕ ಮಕ್ಕಳಿಗೆ ಬಟ್ಟೆಬರೆಯ ಕಿಟ್ ಗಳನ್ನು ಅತಿಥಿಗಳ ಕೈನಿಂದಲೇ ಕೊಡಿಸಲಾಯಿತು. ಚಿತ್ರದ ನಾಯಕ ಹರ್ಷವರ್ಧನ್, ನಾಯಕಿ ದಿವ್ಯಾಗೌಡ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯತಿರಾಜ್ ಕಾರ್ಯಕ್ರಮ ನಿರೂಪಿಸಿದರು.