Skip to content
FilmySphere

From the earlier FilmySphere, kept as published on 2014-11-11. It has not been updated.

Preethi Endha movie songs in Whats App

'ಪ್ರೀತಿಯಿಂದ' ಹಾಡುಗಳು ವಾಟ್ಸಪ್ ನಲ್ಲಿ

ಪ್ರೀತಿಯಿಂದ ಚಿತ್ರದ ಹಾಡುಗಳನ್ನು ಪರದೆಯ ಮೇಲೆ ತೋರಿಸಿ ವಾಟ್ಸ್ ಅಪ್ ನಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿ ತೋರಿಸಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿತ್ತು. ಸಮಾರಂಭದಲ್ಲಿ ಹಿರಿಯ ನಟಿ ಡಾ.ಭಾರತೀ ವಿಷ್ಣುವರ್ಧನ್ ರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪ್ರೀತಿಯಿಂದ ಚಿತ್ರದ ನಾಯಕ ರಾಕೇಶ್ ಅಡಿಗ ಮಾತನಾಡಿ 'ಇಂದು ಚಿತ್ರೋದ್ಯಮದ ಹಿರಿಯರ ಸಮ್ಮುಖದಲ್ಲಿ ಹಾಡುಗಳು ವಾಟ್ಸಪ್ ನಲ್ಲಿ ಲಭ್ಯವಾಗುತ್ತಿರುವುದು ಖುಷಿಯ ವಿಚಾರ. ಇವರೆಲ್ಲರ ಆಶೀರ್ವಾದ ಹೀಗೇ ಇರಲಿ ಎಂದರು. ಚಿತ್ರದಲ್ಲಿ ನಾಯಕನ ತಾಯಿಯಾಗಿ ನಟಿಸಿರುವ ಲಕ್ಷ್ಮೀ ಚಂದ್ರಶೇಖರ್ 'ಇದರಲ್ಲಿ ಹುಡುಗ ಹುಡುಗಿಯ ಜೊತೆಗೆ ತಾಯಿ ಮಗನ ಪ್ರೀತಿಯನ್ನೂ ಹೇಳಲಾಗಿದೆ. ಮಾದೇಶ್ವರ ಹಾಡಿನಲ್ಲಿ ನಾನು ನಟಿಸಿರುವುದು ಮರೆಯಲಾಗದ ಅನುಭವ ಎಂದರು. ಜನ ಪ್ರತಿನಿಧಿ ಲಕ್ಷ್ಮೀನಾರಾಯಣರು ಮಾತನಾಡಿ 'ನನಗೆ ತಿಳಿದಿರುವಂತೆ ಮಾದೇಶ್ವರನ ಹಾಡನ್ನೊಳಗೊಂಡ ಚಿತ್ರ ಸೋತ ಉದಾಹರಣೆಯೇ ಇಲ್ಲ' ಎಂದರು. ಬಳಿಕ ಮಾತನಾಡಿದ ಗಿರಿಜಾ ಲೋಕೇಶ್ 'ಪ್ರೀತಿಯಿಂದ ಚಿತ್ರದ ಹಾಡುಗಳ ಬಿಡುಗಡೆಯಾಗಿ ಬಹಳ ದಿನಗಳಾಗಿವೆ. ಹಾಡುಗಳು ಸುಮಧುರವಾಗಿದ್ದರೂ ಕೇಳುಗರು ಪ್ರೀತಿಯಿಂದ ಆಸ್ವಾದಿಸುವಲ್ಲಿ ಯಾಕೋ ಹಿಂದೆ ಬಿದ್ದಿದ್ದಾರೆ ಎಂದರು. ಚಿತ್ರದ ಕತೆ, ಚಿತ್ರಕತೆ ಬರೆದು ನಿರ್ದೇಶನ ನಿರ್ವಹಿಸಿರುವ ರಾಜು ಹಲಗೂರು 'ಚಿತ್ರಕ್ಕೆ ಸೆನ್ಸಾರ್ ನಿಂದ ಯು ಸರ್ಟಿಫಿಕೇಟ್ ಸಿಕ್ಕಿದೆ. ಇನ್ನು ಪ್ರೇಕ್ಷಕರ ಪ್ರೋತ್ಸಾಹದ ಅಗತ್ಯವಿದೆ' ಎಂದರು. ಚಿತ್ರದ ಹಾಡುಗಳನ್ನು ತಕ್ಷಣದಲ್ಲೇ ಕೇಳಲು ಸಾಧ್ಯವಾಗುವಂತೆ ವಾಟ್ಸಪ್ ನಂಬರ್ 9731111696 ಮತ್ತು 9632132744 ಬಿಡುಗಡೆ ಮಾತನಾಡಿದ ನಿರ್ದೇಶಕ ನಾಗ್ತಿಹಳ್ಳಿ ಚಂದ್ರಶೇಖರ್ ಮಾರ್ಮಿಕವಾದ ಮಾತುಗಳನ್ನಾಡಿ ಗಮನ ಸೆಳೆದರು. 'ಚಿತ್ರರಂಗ ಎಂಬುದೊಂದು ಕಾಡಿದ್ದ ಹಾಗೆ. ಕಾಡಲ್ಲಿ ದೊಡ್ಡದೊಡ್ಡ ಮರಗಳು ಎಷ್ಟು ಅಗತ್ಯವೋ ಚಿಕ್ಕಪುಟ್ಟ ಮರಗಿಡಗಳೂ ಅಷ್ಟೇ ಅಗತ್ಯ. ಅವೆರಡೂ ಸೇರಿದರೇನೇ ಕಾಡಾಗಲು ಸಾಧ್ಯ. ಸದ್ಯಕ್ಕೆ ನಮ್ಮ ಚಿತ್ರರಂಗದಲ್ಲಿ ಸ್ಟಾರ್ ಗಳ ಯುಗ ನಡೆಯುತ್ತಿದೆ! ಆದರೆ ಕಾಡೆಂದ ಮೇಲೆ ಹುಲಿ ಸಿಂಹಗಳಿದ್ದರೆ ಸಾಲದು; ಜಿಂಕೆ, ಮೊಲಗಳೂ ಇರಬೇಕು. ಅವುಗಳನ್ನು ಅವುಗಳ ಪಾಲಿಗೆ ಬದುಕಲು ಬಿಡಬೇಕಾಗಿದೆ' ಎಂಬುದು ನಾಗ್ತಿಹಳ್ಳಿಯವರ ಮಾತಾಗಿತ್ತು. ಇದೇ ಸಂದರ್ಭದಲ್ಲಿ ಚಿತ್ರರಂಗದಲ್ಲಿನ 50ವರ್ಷಗಳ ಸೇವೆಗಾಗಿ ಸನ್ಮಾನಿತರಾದ ಡಾ.ಭಾರತಿ ವಿಷ್ಣುವರ್ಧನ್ 'ನಾನು ಪ್ರೀತಿಯಿಂದ ಕರೆದಿದ್ದಕ್ಕಾಗಿ ಪ್ರೀತಿಯಿಂದ ಬಂದಿದ್ದೇನೆ. ನಡೆಯುತ್ತಾ ಹೋಗುವವನಿಗೆ ಹಿಂದಿರುಗಿ ನೋಡಿದರಷ್ಟೇ ಐವತ್ತು ಕಿಲೋಮೀಟರ್ ದಾಟಿರುವ ಸತ್ಯ ಮನವರಿಕೆಯಾದೀತು. ಇಲ್ಲವಾದರೆ ಹೊಸಹೊಸ ಪ್ರದೇಶಗಳನ್ನು ದಾಟುತ್ತಾ ಕುತೂಹಲದೊಂದಿಗೆ ಸಾಗುವಾಗ ಕ್ರಮಿಸಿದ ದೂರ ತಿಳಿಯುವುದೇ ಇಲ್ಲ. ನಾನು ಸದ್ಯ ಅದೇ ಉತ್ಸಾಹದಲ್ಲೇ ಇದ್ದೇನೆ ಎಂದರು.