From the earlier FilmySphere, kept as published on 2014-11-08. It has not been updated.
Kottegondhu Love Story Audio release
ಕೋಟಿಗೊಂದು ಲವ್ ಸ್ಟೋರಿ ಧ್ವನಿಸಾಂದ್ರಿಕೆ ಬಿಡುಗಡೆ
'ನಿರ್ದೇಶಕರು ನನ್ನಲ್ಲಿ ಚಿತ್ರದ ಕತೆ ಹೇಳಿದ ತಕ್ಷಣ ಬಾಯಿಯಿಂದ ಹೊರಟ ಉದ್ಗಾರವೇ ಕೋಟಿಗೊಂದು ಲವ್ ಸ್ಟೋರಿ ಎಂಬ ಮೆಚ್ಚುಗೆಯ ನುಡಿ. ಅದನ್ನೇ ಚಿತ್ರಕ್ಕೆ ಶೀರ್ಷಿಕೆಯಾಗಿಸಲು ಅವರು ತಯಾರಾದರು. ನಾನು ನಿರ್ಮಾಣಕ್ಕೂ ಸಿದ್ಧನಾದೆ' ಎಂದರು ನಿರ್ಮಾಪಕ ಎಚ್ ಎಲ್ ಎನ್ ರಾಜು. ಚಿತ್ರಕ್ಕೆ ನಾನು ನಿರ್ಮಾಪಕನಷ್ಟೇ ಅಲ್ಲ, ತೆರೆಯಮೇಲೆ ಡಾಕ್ಟರ್ ಪಾತ್ರವಾಗಿಯೂ ಕಾಣಿಸಿಕೊಳ್ಳಲಿದ್ದೇನೆ ಎಂದ ರಾಜುವಿಗೆ ಒಂದೇ ದಿನದಲ್ಲಿ 8ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ದಾಖಲೆಯ ನಿರ್ದೇಶಕನೆನಿಸಿದ ನಿರ್ದೇಶಕರ ಮೇಲೆ ಖುಷಿ, ಭರವಸೆಗಳಿವೆಯಂತೆ. ಅಂದಹಾಗೆ ನಿರ್ಮಾಪಕರ ಬಾಯಿಯಿಂದ ಇಂಥ ಒಳ್ಳೆಯ ಮಾತುಗಳು ಬಂದಿದ್ದು ಕೋಟಿಗೊಂದು ಲವ್ ಸ್ಟೋರಿ ಚಿತ್ರದ ಹಾಡುಗಳ ಸೀಡಿ ಬಿಡುಗಡೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ.
ನಿರ್ದೇಶಕ ಜಗ್ಗು ಸಿರ್ಸಿಗೆ ಇದು ಪ್ರಥಮ ಚಿತ್ರ. ಆದರೆ ಚಿತ್ರದಲ್ಲಿ ಪ್ರೇಮಿಗಳ ಲವ್ ಜೊತೆಗೆ ಪ್ರಕೃತಿ ಪ್ರೇಮವನ್ನೂ ತೋರಿಸುವ ಡಬ್ಬಲ್ ಕೆಲಸ ಮಾಡಿರುವುದಾಗಿ ಜಗ್ಗು ಹೇಳಿಕೊಂಡರು. ಅದಕ್ಕಾಗಿ ಸಿರ್ಸಿಯ ಪ್ರಧಾನ ಜಲಪಾತಗಳನ್ನು ಸೇರಿಸಿದಂತೆ ರುದ್ರ ರಮಣೀಯ ದೃಶ್ಯಗಳನ್ನು ಸೆರೆ ಹಿಡಿದಿದ್ದಾರಂತೆ. ಒಟ್ಟು ಚಿತ್ರ ನೋಡಿದವರಿಗೆ ಇದು ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋದ ಯಾತ್ರೆಯ ಹಾಗಿರುತ್ತದೆ ಎಂಬುದು ಅವರ ಅನಿಸಿಕೆಯಾಗಿತ್ತು. ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ರಾಕೇಶ್ ಅಡಿಗ ತಮ್ಮದು ಟಾಕೆಟಿವ್ ಹುಡುಗನ ಪಾತ್ರ. ಚಿತ್ರದ ಕತೆ, ಹಾಡುಗಳು ಚೆನ್ನಾಗಿವೆ ಎಂದರು. ನಾಯಕಿ ಶುಭಾ ಪೂಂಜ ಮಾತನಾಡುತ್ತಾ ಚಿತ್ರದಲ್ಲಿ ಯೂತ್ ಆತ್ಮಹತ್ಯೆಗೆ ಶರಣಾಗುವ ಕುರಿತಾದ ವಿಚಾರಗಳಿವೆ. ಆರಂಭದಲ್ಲಿ ನನಗೆ ಈ ಕಾನ್ಸೆಪ್ಟ್ ಬಗ್ಗೆ ಅಷ್ಟೊಂದು ತಿಳುವಳಿಕೆಯಿರಲಿಲ್ಲ. ಆದರೆ ಚಿತ್ರೀಕರಣದ ವೇಳೆ ನನ್ನ ಆತ್ಮೀಯ ಗೆಳತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಸುದ್ದಿ ಬಂತು. ಅದರ ಬಳಿಕ ಇದು ತುಂಬ ವಾಸ್ತವಿಕ ನೆಲೆಗಟ್ಟಿನ ಕತೆ ಎಂಬುದು ನನಗೆ ಅರಿವಾಯಿತು ಎಂದರು. ಚಿತ್ರೀಕರಣದ ವೇಳೆ ಕಲಾವಿದರು ಮತ್ತು ತಂತ್ರಜ್ಞರು ರಿಸ್ಕ್ ತೆಗೆದುಕೊಂಡು ಚಿತ್ರೀಕರಣ ನಡೆಸಿದ ಸಂದರ್ಭಗಳು ಇದ್ದವು ಎಂಬುದನ್ನು ಕೂಡ ಅವರು ನೆನಪಿಸಿಕೊಂಡರು. ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ಸಿಂಧೂರಾವ್ ಗೆ ಶುಭಾ ಪೂಂಜಾ ಒಬ್ಬರು ಆತ್ಮೀಯ ಸ್ನೇಹಿತೆಯೆನಿಸಿದ್ದಾಗಿ ಹೇಳಿದರು. ಸಮಾರಮಭದ ಕೇಂದ್ರಬಿಂದುವಾಗಿದ್ದ ಸಂಗೀತ ನಿರ್ದೇಶಕ ಕೀರ್ತಿಜೈನ್ ಗೆ ಇದು ಎರಡನೆಯ ಚಿತ್ರ. ಅವರು ಉತ್ಸಾಹದಿಂದ ಪ್ರತಿ ಹಾಡಿನ ಒಂದೊಂದು ಲೈನ್ ನ್ನೂ ಹಾಡಿ ತೋರಿಸಿದರು! ಛಾಯಾಗ್ರಾಹಕ ಶಂಕರ್ ಮತ್ತು ಹೊಸದಾಗಿ ಪರಿಚಿತರಾಗುತ್ತಿರುವ ಎಡಿಟರ್ ಶ್ರೀಧರ್ ಚಿತ್ರದ ಕ್ವಾಲಿಟಿಯನ್ನು ಹೆಚ್ಚಿಸಲು ಸಹಕರಿಸಿದ್ದಾರೆಂಬ ಮಾತು ಚಿತ್ರತಂಡದಿಂದ ಹೊರಗೆ ಬಂತು. ಅದೇ ರೀತಿ ಚಿತ್ರದಲ್ಲಿ ತೋರಿಸಲಾಗಿರುವ ಶಾರ್ಕ್ ಮೀನಿನ ಗ್ರಾಫಿಕ್ ಕೆಲಸಗಳಿಗಾಗಿ ಹೈದರಾಬಾದ್ ಸ್ಟುಡಿಯೋನಲ್ಲಿಯೂ ಕೆಲಸ ನಿರ್ವಹಿಸಿರುವುದನ್ನು ಕೂಡ ತಿಳಿಸಲಾಯಿತು. ಚಿತ್ರಕ್ಕೆ ಬಾಹ್ಯ ಬೆಂಬಲ ನೀಡಿದ ನಿರ್ಮಾಪಕ ಅಣಜಿ ನಾಗರಾಜ್ ಸೀಡಿ ಬಿಡುಗಡೆಗೊಳಿಸಿದ್ದು ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.