From the earlier FilmySphere, kept as published on 2014-11-09. It has not been updated.
Seizer Film Launch Press Meet
ಸೀಸರ್ ಗೆ ಮುಹೂರ್ತ
ನವ ನಿರ್ದೇಶಕ ವಿನಯಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ರಥಮ ಚಿತ್ರವೇ ಸೀಸರ್. ಚಿತ್ರಕ್ಕೆ ಇವರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಕಳೆದ ನಾಲ್ಕು ವರ್ಷಗಳಿಂದ ಕನ್ನಡದ ಖ್ಯಾತ ನಿರ್ದೇಶಕರೊಬ್ಬರ ಬಳಿ ಕೆಲಸ ಮಾಡಿದ ಅನುಭವ ಹೊಂದಿರುವ ವಿನಯ ಕೃಷ್ಣ ಸದ್ಯದ ಮಟ್ಟಿಗೆ ಅವರ ಹೆಸರನ್ನು ಹೇಳುವಂತಿಲ್ಲ ಎಂದರು. ಯಾಕೆಂದರೆ ಈಗಾಗಲೇ ಒಂದಿಬ್ಬರು ಅವರ ಶಿಷ್ಯರೆಂದು ಹೇಳಿಕೊಂಡು ಚಿತ್ರವನ್ನು ಪೂರ್ತಿ ಮಾಡದೆ ಅರ್ಧಕ್ಕೆ ನಿಲ್ಲಿಸಿದ್ದಾರಂತೆ. ಹಾಗೆ ಅವರೇ ನೊಂದುಕೊಂಡಿರಬೇಕಾದರೆ ತಾನು ಅಂಥವನಲ್ಲ ಎಂಬುದನ್ನು ಚಿತ್ರವನ್ನು ತೆರೆಗೆ ತಂದೇ ಸಾಬೀತು ಪಡಿಸುತ್ತೇನೆ. ಅದರ ಬಳಿಕವೇ ನನ್ನ ಗುರುವಿನ ಬಗ್ಗೆ ಹೇಳಲಿದ್ದೇನೆ ಎಂಬುದು ವಿನಯಕೃಷ್ಣರ ನಿಲುವು. ಸೀಸರ್ ಎಂಬ ಕತೆ ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಅನುಭವದಿಂದ ಹುಟ್ಟಿಕೊಂಡದ್ದೆಂದು ಹೇಳುವ ಮೂಲಕ ಇದೊಂದು ರಿಮೇಕ್ ಚಿತ್ರವಂತೂ ಅಲ್ಲವೆಂಬ ಭರವೆಸೆ ನೀಡಿದ್ದಾರೆ. ನನ್ನ ವಾಹನವನ್ನು ಸೀಸ್ ಮಾಡಿಕೊಂಡು ಹೋದ ದಿನಗಳಲ್ಲಿ ನನ್ನೊಳಗಾಗಿದ್ದ ತುಮುಲವೇ ಈ ಚಿತ್ರವನ್ನು ಮಾಡಲು ಪ್ರಥಮ ಪ್ರೇರಣೆ ನೀಡಿತು. ಖಾಸಗಿ ವಾಹನ ಸೀಸ್ ಆಗಿ ತನ್ನದೇ ವಾಹನಕ್ಕೆ ಡ್ಯೂ ಕಟ್ಟಿದಾತನ ಮನಸ್ಥಿತಿಯನ್ನು ಚಿತ್ರದಲ್ಲಿ ತೋರಿಸಲಿದ್ದಾರಂತೆ. ಆದರೆ ಚಿತ್ರದ ನಾಯಕ ಒಬ್ಬ ವಾಹನಗಳನ್ನು ಸೀಸ್ ಮಾಡುವ ಸೀಸರ್ ಆಗಿರುತ್ತಾನೆ ಎಂದ ವಿನಯಕೃಷ್ಣ ಆತ ಯಾಕೆ ಆ ಕೆಲಸವನ್ನೇ ಆಯ್ದುಕೊಂಡಿರುತ್ತಾನೆ ಎಂಬುದರ ಮಾಹಿತಿ ಚಿತ್ರದಲ್ಲಿರುತ್ತದೆ ಎಂದರು. ಚಿತ್ರದ ನಾಯಕ ಚಿರಂಜೀವಿ ಸರ್ಜ ಮಾತನಾಡುತ್ತಾ ಚಿತ್ರದಲ್ಲಿ ನಾಯಕನಿಗಿರುವ ವಿಭಿನ್ನವಾದ ವೃತ್ತಿಯೇ ಈ ಚಿತ್ರದ ಕತೆ ಕೇಳಿದ ತಕ್ಷಣ ನನ್ನನ್ನು ಒಪ್ಪಿಕೊಳ್ಳುವಂತೆ ಮಾಡಿತು ಎಂದರು. ಚಿತ್ರದ ಮೂಲಕ ಪ್ರಥಮ ಬಾರಿಗೆ ಸಂಗೀತ ನಿರ್ದೇಶಕರಾಗಿ ಪರಿಚಯಿಸಲ್ಪಡುತ್ತಿರುವ ಗಾಯಕ, ಸಾಹಿತಿ ಚಂದನ್ ಶೆಟ್ಟಿ ನನ್ನ ಸ್ವಂತ ತಮ್ಮನ ಥರ, ಆತ್ಮೀಯ ಎಂದರು. ಬಳಿಕ ಮಾತನಾಡಿದ ಚಂದನ್ 'ನಾನು ಇದುವರೆಗೆ 25ರಷ್ಟು ಚಿತ್ರಗಳಿಗೆ ಅರ್ಜುನ್ ಜನ್ಯಗೆ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದೇನೆ. ಮಣಿಕಾಂತ್ ಕದ್ರಿ, ಶ್ರೀಧರ್ ಗರಡಿಯಲ್ಲಿಯೂ ಕೆಲಸ ಮಾಡಿದ್ದೇನೆ ಎಂದರು. ಚಿತ್ರದ ನಾಯಕಿ ಪಾರುಲ್ ಯಾದವ್ ಗೆ ಇದರಲ್ಲಿ ನಾಯಕಿಗೂ ಪ್ರಾಧಾನ್ಯತೆ ಇರುವುದರಿಂದಾಗಿ ಪಾತ್ರ ಮಾಡುವುದು ಖುಷಿ ತಂದಿದೆಯಂತೆ. ಚಿತ್ರದಲ್ಲಿ ನಾಯಕ ನನ್ನ ಕಾರನ್ನು ಸೀಸ್ ಮಾಡುತ್ತಾನೆ. ಆಮೇಲೆ ನಡೆಯುವ ಲವ್, ಕಾಮಿಡಿ ಚಿತ್ರದಲ್ಲಿ ಒಳ್ಳೆಯ ಮನರಂಜನೆಯೊದಗಿಸುತ್ತದೆ ಎಂದು ಭರವಸೆ ನೀಡಿದರು. ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಲಿರುವ ಥ್ರಿಲ್ಲರ್ ಮಂಜು 'ಚಿರಂಜೀವಿ ಸರ್ಜ ಜೊತೆ ನನಗಿದು ಮೂರನೇ ಚಿತ್ರ. ಒಟ್ಟು ಅವರು ಇದುವರೆಗಿನ ಯಾವ ಚಿತ್ರಗಳಲ್ಲಿಯೂ ಮಾಡಿರದಷ್ಟು ಸಾಹಸ ದೃಶ್ಯಗಳನ್ನು ಖಂಡಿತಾ ಚಿತ್ರಕ್ಕಾಗಿ ನೀಡಲಿದ್ದೇನೆ' ಎಂದು ಹೇಳುವುದರೊಂದಿಗೆ ಚಿತ್ರ ಪಕ್ಕಾ ಮಸಾಲ ಚಿತ್ರವಾಗಿ ಪ್ರೇಕ್ಷಕರನ್ನು ಸೆಳೆಯಬಹುದೆಂದು ನಿರೂಪಿಸಿದರು. ಚಿತ್ರದಲ್ಲಿ ರಮೇಶ್ ಭಟ್, ರವಿಶಂಕರ್, ಅವಿನಾಶ್ ಮೊದಲಾದ ಹಿರಿಯ ಕಲಾವಿದರು ನಟಿಸುತ್ತಿದ್ದು ಬೆಂಗಳೂರು ಸೇರಿದಂತೆ ಶಬರಿಮಲೆಯಲ್ಲಿಯೂ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕೆ ಇರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಖಿಸಲಾಯಿತು