Skip to content
FilmySphere

From the earlier FilmySphere, kept as published on 2014-11-08. It has not been updated.

Raja rajendra Digital poster release

'ರಾಜರಾಜೇಂದ್ರ'ದ ಡಿಜಿಟಲ್ ಪೋಸ್ಟರ್ ಬಿಡುಗಡೆ

ಚಿತ್ರವೊಂದರ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲು ತಂಡಕ್ಕೆ ಹಲವು ಕಾರಣಗಳಿರುತ್ತವೆ. ಅದರಲ್ಲೊಂದು ವಿಭಿನ್ನ ಕಾರಣವನ್ನಿಟ್ಟುಕೊಂಡು ಮಾಧ್ಯಮದವರನ್ನು ಆಹ್ವಾನಿಸಿತ್ತು ರಾಜರಾಜೇಂದ್ರ ಚಿತ್ರತಂಡ. ಚಿತ್ರದ ಡಿಜಿಟಲ್ ಪೋಸ್ಟರ್ ಬಿಡುಗಡೆಯೇ ಆ ವಿಶೇಷವಾಗಿತ್ತು.

ಜಯಲಲಿತಾ ಚಿತ್ರದ ಬಳಿಕ ಪಿ.ಕುಮಾರ್ ನಿರ್ದೇಶಿಸುತ್ತಿರುವ ಶರಣ್ ನಾಯಕತ್ವದ ಮತ್ತೊಂದು ಚಿತ್ರ ಇದಾಗಿದ್ದು ನಿರ್ದೇಶನದೊಂದಿಗೆ ಚಿತ್ರದ ಕತೆ, ಚಿತ್ರ ಕತೆಯನ್ನು ತಾವೇ ಬರೆದಿರುವುದಾಗಿ ಕುಮಾರ್ ತಿಳಿಸಿದರು. ಚಾಮುಂಡೇಶ್ವರಿ ಸ್ಟುಡಿಯೋದ ಪರದೆಯ ಮೇಲೆ ಕಾಣಿಸಿಕೊಂಡ ಪೋಸ್ಟರ್ ಲಾಂಚ್ ಆದೊಡನೆ ಮಾತನಾಡಿದ ನಿರ್ದೇಶಕ ಕುಮಾರ್ ಇದು ಚಿತ್ರದ ಪ್ರಥಮ ಪತ್ರಿಕಾಗೋಷ್ಠಿಯಾಗಿರುವುದರಿಂದ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಂಡರು. ಜಯಲಲಿತಾ ಚಿತ್ರವನ್ನು ಮಾಡುತ್ತಿರುವಾಗಲೇ ನಾನು ಈ ಚಿತ್ರದ ಕತೆಯನ್ನು ಶರಣಗ್ ಗೆ ಹೇಳಿದ್ದೆ. ಅವರೇ ನನಗೆ ನಿರ್ಮಾಪಕ ಉದಯ್ ಕೆ ಮೆಹ್ತಾರನ್ನು ಪರಿಚಯಿಸಿಕೊಟ್ಟಿದ್ದಾರೆ. ಇದೀಗ ಚಿತ್ರದ ಮುಕ್ಕಾಲು ಭಾಗ ಪೂರ್ತಿಯಾಗಿದೆ. ಸಾಧು ಕೋಕಿಲ, ರವಿಶಂಕರ್, ನೀನಾಸಂ ಅಶ್ವಥ್ಥ್ ಮೊದಲಾದವರ ತಾರಾಗಣ ಚಿತ್ರದಲ್ಲಿದೆ. ಮಾತ್ರವಲ್ಲ ಪನ್ನೀರ್ ಸೆಲ್ವಂ ಛಾಯಾಗ್ರಹಣ ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್ ಆಗಿರುತ್ತದೆ ಎಂದು ಹೇಳಲು ಅವರು ಮರೆಯಲಿಲ್ಲ. ಬಳಿಕ ನಾಯಕ ಶರಣ್ ಎಂದಿನಂತೆ ಹೆಚ್ಚಿನ ಮಾಹಿತಿಗಳೊಂದಿಗೆ ಮಾತನಾಡತೊಡಗಿದರು. ಇದು ಸುಮಾರು 1939ರ ಕಾಲಘಟ್ಟದಲ್ಲಿನಡೆಯುವ ಕತೆ. ಆಗಿನ ಕಾಲದ ರಾಜನಾಗಿ ನಟಿಸುವುದರ ಜೊತೆಗೆ 2014ರಲ್ಲಿನ ಬಾಟಲ್ ಮಣಿ ಎಂಬ ಆಧುನಿಕ ಶರಣ್ ಕೂಡ ಚಿತ್ರದಲ್ಲಿರುತ್ತಾನೆ. ಆದರೆ ಎರಡೂ ಕಾಲಘಟ್ಟಗಳನ್ನು ಒಟ್ಟೊಟ್ಟಿಗೆ ಸೇರಿಸಿ ತೋರಿಸುವುದು ಚಿತ್ರದ ವಿಶೇಷ. ರ್ಯಾಂಬೋ ಮತ್ತು ವಿಕ್ಟರಿ ಬಳಿಕ ಅರ್ಜುನ್ ಜನ್ಯ ಜೊತೆಗಿನ ತಮ್ಮ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರದ ಹಾಡುಗಳು ಮತ್ತೊಂದು ಸುಪರ್ ಹಿಟ್ ಆಲ್ಬಮ್ ಆಗುವ ನಿರೀಕ್ಷೆ ನೀಡಿದೆ. ನಾಗೇಂದ್ರ ಪ್ರಸಾದ್ ಜೊತೆಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಎಲ್ಲ ಐದು ಹಾಡುಗಳಿಗೂ ಮುರಳಿ ಕೊರಿಯಾಗ್ರಫಿ ಮಾಡಿರುವುದು ವಿಶೇಷ. ಅದೇ ರೀತಿ ನನ್ನ ಚಿತ್ರದ ಪರ್ಮನೆಂಟ್ ಕಲಾವಿದರೆನಿಸಿದ ರವಿಶಂಕರ್ ಮತ್ತು ತಬಲಾ ನಾಣಿ ಇರುತ್ತಾರೆ ಎಂದರು ಶರಣ್. ನಾಯಕಿ ಇಶಿಕಾ ದತ್ತ ಬಾಲಿವುಡ್ ನಟಿ ತನುಶ್ರೀ ದತ್ತಾ ಸಹೋದರಿಯಾಗಿದ್ದು ಚಿತ್ರದ ಮೂಲಕ ನನಗೆ ತಾಳ್ಮೆಯುಳ್ಳ ನಿರ್ದೇಶಕ, ಒಳ್ಳೆಯ ನಿರ್ಮಾಪಕ ಮತ್ತು ಆತ್ಮೀಯ ನಾಯಕ ನಟನ ಪರಿಚಯವಾಯಿತು ಎಂದರು. ನಿರ್ಮಾಪಕ ಅಣಜಿ ನಾಗರಾಜ್ ಸ್ನೇಹಪೂರ್ವಕವಾಗಿ ವೇದಿಕೆಯಲ್ಲಿದ್ದರು. ಆರ್.ಜೆ ನವೀನ ಕಾರ್ಯಕ್ರಮ ನಿರೂಪಿಸಿದರು.