From the earlier FilmySphere, kept as published on 2014-11-07. It has not been updated.
Abhimanyu Kannada Movie Review
ಅಭಿಮನ್ಯು ಚಿತ್ರ ವಿಮರ್ಶೆ
ಅಭಿಮನ್ಯು ಸೋಲುವುದಿಲ್ಲ! ಹೊಡೆದಾಟದ ಚಿತ್ರದಲ್ಲಿ ಕೂಡ ಹೇಗೆ ಒಂದು ಒಳ್ಳೆಯ ಸಂದೇಶ ನೀಡಬಹುದೆಂಬುದನ್ನು ಅಭಿಮನ್ಯು ಚಿತ್ರದ ಮೂಲಕ ಅರ್ಜುನ್ ಸರ್ಜ ಸಾಬಿತು ಮಾಡಿದ್ದಾರೆ.ಚಿತ್ರದ ಆರಂಭದಲ್ಲೇ ತೋರಿಸಿರುವ ಕಥೆಯಲ್ಲಿ ಪ್ರತಿಷ್ಠಿತ ಕಾನ್ವೆಂಟ್ ನಲ್ಲಿ ತನ್ನ ಮಗಳನ್ನು ಕಲಿಸ ಬಯಸುವ ಬಡವನಿದ್ದಾನೆ. ಆತ ಅಲ್ಲಿನ ಭಾರೀ ಫೀಸನ್ನು ಪೂರ್ತಿಯಾಗಿ ಕಟ್ಟಲಾಗದೆ ಕುಟುಂಬ ಸಮೇತ ಆತ್ಮಹತ್ಯೆಗೈಯುತ್ತಾನೆ. ಈ ದುರಂತವನ್ನು ಕಣ್ಣಾರೆ ಕಂಡ ಒಬ್ಬ ಕರಾಟೆ ಮಾಸ್ಟರ್ ಖಾಸಗಿ ಶಿಕ್ಷಣ ಸಂಸ್ಥೆಗಳನ್ನೆಲ್ಲ ಸರ್ಕಾರೀಕರಣಗೊಳಿಸಲು ಹೋರಾಡುತ್ತಾನೆ. ಆತನನ್ನು ಧಮನಿಸಲು ಖಾಸಗಿ ಶಿಕ್ಷಣ ಸಂಸ್ಥೆಯ ಮಾಲಕರು ಡಾನ್ ಒಬ್ಬನ ಮೂಲಕ ಹಿಂಸಾತ್ಮಕ ಪ್ರಯತ್ನ ಮಾಡುತ್ತಾರೆ. ಇದೆಲ್ಲವನ್ನು ಕರಾಟೆ ಮಾಸ್ಟರ್ ಹೇಗೆ ಸಮರ್ಥವಾಗಿ ಎದುರಿಸಿ ಗೆಲ್ಲುತ್ತಾನೆ ಎಂಬುದೇ ಚಿತ್ರದ ಕತೆ.
ಆರಂಭದಲ್ಲಿರುವ ಬಡವನ ಮನೆಯ ಕತೆ ಒಂದು ಶೈಕ್ಷಣಿಕ ಕಿರುಚಿತ್ರವೇನೋ ಎಂಬಂತೆ ಅನಿಸದಿರದು. ದುಡ್ಡಿಗಾಗಿ ಕಿಡ್ನಿ ಮಾರುವ ತಂದೆಯ ಪಾತ್ರದ ಮೂಲಕ ಸಕತ್ ಸೆಂಟಿಮೆಂಟ್ ಗೆ ಪ್ರಯತ್ನಿಸಲಾಗಿದೆ. ಆದರೆ ಬಡತನಕ್ಕೆ ರೂಪಕೊಟ್ಟಂತೆ ಕಾಣಿಸುವ ಬೀರಾದಾರ್ ಪಾತ್ರ ನಿರ್ವಹಣೆ ಕತೆಗೆ ಜೀವತುಂಬಿದೆ. ತಮ್ಮ ನಟನೆ ಕಂಡವರು ಮರೆಯಲಾಗದಂಥ ಅಭಿನಯವನ್ನು ಬೀರಾದಾರ್ ನೀಡಿದ್ದಾರೆ. ಅರ್ಜುನ್ ಸರ್ಜಾ ಇನ್ನೂ ಜಂಟ್ಲ್ ಮ್ಯಾನ್ ಇಮೇಜ್ ನಲ್ಲೇ ಇರುವುದನ್ನು ಚಿತ್ರದ ಆರಂಭದಿಂದಲೇ ಕಾಣಬಹುದು. ಮಗು ಮತ್ತು ಕುಟುಂಬದ ಸಾವು ನಾಯಕ ಅತನ ಗುರಿಯನ್ನೇ ಬದಲಿಸುವಷ್ಟರ ಮಟ್ಟಿನ ಸಂಬಂಧ ಹೊಂದಿತ್ತು ಎಂಬುದನ್ನು ಪರಿಣಾಮಕಾರಿಯಾಗಿ ತೋರಿಸಲಾಗಿಲ್ಲ. ಅದೇ ರೀತಿ ನಾಯಕಿ ಕೂಡ ನಾಯಕನನ್ನು ಆರಂಭದಿಂದಲೇ ಯಾಕೆ ಅಷ್ಟೊಂದು ಇಷ್ಟಪಟ್ಟಿರುತ್ತಾಳೆ ಎಂಬುದಕ್ಕೂ ಉತ್ತರವಿಲ್ಲ. ಅರ್ಜುನ್ ಎಂದಿನಂತೆ ನಟನೆಗಿಂತ ಹೊಡೆದಾಟದಲ್ಲಿ ಆಕರ್ಷಕವೆನಿಸುತ್ತಾರೆ. ಸ್ಟಂಟ್ ಮಾಸ್ಟರ್ ಕೂಡ ಅಭಿನಂದನಾರ್ಹರಾಗುತ್ತಾರೆ. ನಾಯಕಿ ಸುರ್ವಿನ್ ಚಾವ್ಲಾರಲ್ಲಿ ಆಕೆಯ ಚೆಲುವಿನಷ್ಟು ನಟನೆ ಕಾಣಿಸದು. ಬಹುಶಃ ಚಿತ್ರವನ್ನು ಡಬ್ ಮಾಡುವ ಉದ್ದೇಶದಿಂದಲೇ ಇರಬಹುದು ಹೆಚ್ಚಿನ ಪಾತ್ರಗಳಿಗೆ ತಮಿಳು, ತೆಲುಗು ಕಲಾವಿದರನ್ನೇ ಬಳಸಿಕೊಳ್ಳಲಾಗಿದೆ. ರಾಹುಲ್ ದೇವ್ ಪಾತ್ರಕ್ಕೆ ಅನಗತ್ಯ ಬಿಲ್ಡಪ್ ನೀಡಲಾಗಿದೆ. ತಮಿಳಲ್ಲಿ ವಡಿವೇಲು ಮಾಡುವ ಹಾಸ್ಯಕ್ಕಾಗಿ ಹಾಸ್ಯವೆಂಬಂಥ ಪಾತ್ರವನ್ನು ಜಹಾಂಗೀರ್ ಟ್ರ್ಯಾಕ್ ಮೂಲಕ ತೋರಿಸಲಾಗಿದೆ. ತಮ್ಮ ಶೈಲಿ ಬಿಟ್ಟು ಸಂಗೀತ ನೀಡಿರುವ ಅರ್ಜುನ್ ಜನ್ಯಾ ನಿರಾಶೆ ಮೂಡಿಸುತ್ತಾರೆ. ಅನಗತ್ಯ ದೃಶ್ಯ ಮತ್ತು ಹಾಡುಗಳಿಗೆಲ್ಲ ಸ್ವಲ್ಪ ಕತ್ತರಿ ಹಾಕಿದ್ದರೆ ಚಿತ್ರದ ದೀರ್ಘಾವಧಿಯನ್ನು ಕಡಿಮೆಗೊಳಿಸಬಹುದಿತ್ತು. ಚಿತ್ರ ಮೊದಲೊಂದಷ್ಟು ಬೋರು ಹೊಡೆಯುತ್ತದೆ. ಆರಂಭದಲ್ಲೇ ನಾಯಕನಿಗೆ ಗುಂಡೇಟು ಬೀಳುವುದನ್ನು ತೋರಿಸುವುದರಿಂದಾಗಿ ಮುಂದೆ ನಾಯಕನ ರೌದ್ರಾವತಾರ ನೋಡಲು ಪ್ರೇಕ್ಷಕರು ಕಾಯುತ್ತಾರೆ. ಆ ಕಾಯುವಿಕೆಗೆ ನಿರಾಶೆ ಮಾಡದಂತೆ ಚಿತ್ರಕ್ಕೆ ಅಂತ್ಯ ನೀಡುವಲ್ಲಿ ಅರ್ಜುನ್ ಯಶಸ್ವಿಯಾಗಿದ್ದಾರೆ.