From the earlier FilmySphere, kept as published on 2014-11-03. It has not been updated.
Looti film Pressmeet
ರಸಿಕರ ಮನ 'ಲೂಟಿ'ಗೈಯಲು ಇಷಾ ಡಾನ್ಸ್
ಲೂಟಿ ಚಿತ್ರಕ್ಕಾಗಿ ಐಟಂ ಡಾನ್ಸ್ ಮಾಡುವ ಮೂಲಕ ರಸಿಕರ ಮನಸ್ಸು ಲೂಟಿ ಮಾಡಲು ತಯಾರಾಗಿದ್ದಾರೆ ಇಷಾ ಕೊಪ್ಪೀಕರ್. ಒಂದು ದಿನದಲ್ಲಿ ನಡೆಯುವ ದರೋಡೆಯೊಂದನ್ನು ಅಧಾರಿಸಿ ತಯಾರಾಗುತ್ತಿರುವ ಚಿತ್ರವಿದು. ಚಿತ್ರದಲ್ಲಿ ಎಸಿಪಿ ಪಾತ್ರವನ್ನು ನಿರ್ವಹಿಸಿರುವ ಇಷಾ ಐಟಂ ಡಾನ್ಸ್ ಮಾಡಿದ್ದಾದರೂ ಏಕೆ ಎಂಬುದನ್ನು ತೆರೆಯ ಮೇಲೆಯೇ ರಿವೀಲ್ ಮಾಡುವ ಉದ್ದೇಶ ಚಿತ್ರತಂಡದ್ದು.
ಬಾಲಣ್ಣನ ಅಭಿಮಾನ್ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಆಕರ್ಷಕ ಸೆಟ್ ನಲ್ಲಿ ಇಷಾ ಮತ್ತು ತಂಡದ ಡಾನ್ಸ್ ತೋರಿಸಲೆಂದೇ ಮಾಧ್ಯಮದವರನ್ನು ಆಹ್ವಾನಿಸಿತ್ತು ಚಿತ್ರತಂಡ. 'ಡೇಂಜರಸ್ ಡಾರ್ಲಿಂಗ್ ಅಂತಾರೆ ನನ್ನ..' ಎಂದು ಆರಂಭಗೊಳ್ಳುವ ಹಾಡಿಗೆ ಮಾದಕವಾಗಿಯೇ ಹೆಜ್ಜೆ ಹಾಕುತ್ತಿದ್ದರು ಆಕೆ. ಅದೇ ಹಾಡಿನಲ್ಲಿ ಹೆಜ್ಜೆ ಹಾಕಲೆಂದೇ ಚಿತ್ರದ ನಾಯಕ ಧ್ರುವ ಶರ್ಮರ ಜೊತೆ ಸ್ವಯಂವರ ಚಂದ್ರು ಕೂಡ ಅರಬ್ ವೇಷಧಾರಿಯಾಗಿ ತಯಾರಾಗಿ ನಿಂತಿದ್ದರು. ಇಲ್ಲಿ ದರೋಡೆ ನಡೆಸುವವರಾಗಿ ಧ್ರುವಶರ್ಮ ಮತ್ತು ಚಂದ್ರು ಜೊತೆಗೆ ಶ್ವೇತಾ ಪಂಡಿತ್ ಕೂಡ ಇರುತ್ತಾರೆ. ಆದರೆ ಈ ಹಾಡಿನಲ್ಲಿ ಆಕೆ ಕಾಣಿಸಕೊಳ್ಳುವುದಿಲ್ಲವಾದ ಕಾರಣ ಪತ್ರಿಕಾಗೋಷ್ಠಿಯಲ್ಲಿಯೂ ಅವರ ಸಾನ್ನಿಧ್ಯವಿರಲಿಲ್ಲ. ಜೊತೆಗೆ ಖ್ಯಾತ ರಂಗನಟಿ ಬಿ.ಜಯಶ್ರೀಯವರು ಕೂಡ ಚಿತ್ರದಲ್ಲೊಂದು ವಿಶೇಷ ಪಾತ್ರ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ನಿರ್ದೇಶಕ ಗಿರೀಶ್ ಕಂಪ್ಲಾಪುರ ನೀಡಿದರು. ಅಂದಹಾಗೆ ಈ ಐಟಂ ಡಾನ್ಸ್ ನ ಕಾನ್ಸೆಪ್ಟೇ ಚಿತ್ರದ ನಿರ್ಮಾಪಕ ಎನ್.ಎಂ ನಿರಂಜನ್ ರದ್ದು ಎಂಬುದನ್ನು ತಿಳಿಸಿದಾಗ ಮಾತನಾಡಿದ ನಿರಂಜನ್ ತಾವು ಸಾಕಷ್ಟು ಇವೆಂಟ್ ಗಳನ್ನು ನಡೆಸಿದ್ದು ಅವುಗಳಿಗೆ ಹಾಕುವಂಥ ಸೆಟ್ ಇದು. ಅದೇ ಮಾದರಿಯ ಸೆಟ್ ನಲ್ಲೇ ಒಂದು ಹಾಡು ಇರಬೇಕೆಂಬ ಆಕಾಂಕ್ಷೆ ನನ್ನದಾಗಿತ್ತು. ಯಾಕೆಂದರೆ ಇಷಾ ಡಾನ್ಸ್ ಗೆ ಕೂಡ ಜನಪ್ರಿಯರು. ಅದನ್ನು ಕನ್ನಡ ಚಿತ್ರದ ಮೂಲಕ ಪ್ರೇಕ್ಷಕರಿಗೆ ತೋರಿಸುವುದು ನನ್ನ ಆಗ್ರಹವಾಗಿತ್ತು ಎಂದರು. ಈ ಹಾಡಿಗೆ ನಿರ್ಮಾಪಕರೇ ಸಾಹಿತ್ಯ ನೀಡಿದ್ದಾರೆಂಬುದು ಮತ್ತೊಂದು ವಿಶೇಷ. ಬಳಿಕ ಮಾತನಾಡಿದ ಇಷಾ ' ಸೂರ್ಯವಂಶ ಚಿತ್ರದ ಕಾಲದಿಂದಲೇ ನನಗೆ ನಿರ್ದೇಶಕ ಗಿರೀಶ್ ಪರಿಚಯ. ಜೊತೆಗೆ ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಹೇಳಿದಾಗ ಕೂಡ ಚೆನ್ನಾಗಿದೆಯೆನಿಸಿತು. ಹಾಗಾಗಿ ಹಿಂದೆ ಮುಂದೆ ನೋಡದೆ ಚಿತ್ರವನ್ನು ಒಪ್ಪಿಕೊಂಡೆ ಎಂದರು. ತಮ್ಮ ಚಿತ್ರಬದುಕಿನ ಆರಂಭ ದಕ್ಷಿಣದಿಂದಲೇ ಆಯಿತಲ್ಲವೇ ಎಂಬುದನ್ನು ಅವರಿಗೆ ನೆನಪಿಸಿದಾಗ ಮೂಲತಃ ದಕ್ಷಿಣ ಭಾರತೀಯಳಾದ ತಾವು ಮಂಗಳೂರಿನ ಹುಡುಗಿ ಎಂದು ಹೇಳಿಕೊಳ್ಳಲು ಆಕೆ ಮರೆಯಲಿಲ್ಲ. ಅಂದಹಾಗೆ ಇದು ಐಟಂ ಡಾನ್ಸೋ, ವಿಶೇಷ ಹಾಡೋ ಎಂದು ಕೇಳಿದರೆ ಅವೆರಡರ ನಡುವಿನ ವ್ಯತ್ಯಾಸವೇನೆಂಬುದು ನನಗಿನ್ನೂ ಗೊತ್ತಾಗಿಲ್ಲ ಎಂದರು ಇಷಾ! ಬ್ರೂಸ್ ಲೀ ಅಭಿಮಾನಿಯಾಗಿರುವ ತಾನು ಸಕತ್ ಆ್ಯಕ್ಷನ್ ಪ್ರಿಯೆಯಾಗಿದ್ದು, ಟಾಕ್ವಾಂಡೋನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವುದಾಗಿ ತಿಳಿಸಿದ ಅವರು ಲೂಟಿ ಚಿತ್ರದ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ಗಳಿಲ್ಲದೆ ಭಾಗವಹಿಸಿದ್ದಾರಂತೆ. ಚಿತ್ರದ ಛಾಯಾಗ್ರಾಹಕ ಗಂಗರಾಜು ತಾವು ರಘವೀರ್ ಸ್ನೇಹಿತರಾಗಿದ್ದು ಅವರ ಮೂಲಕವೇ ಚೈತ್ರದ ಪ್ರೇಮಾಂಜಲಿಗೆ ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಪರಿಚಯಗೊಂಡಿದ್ದನ್ನು ನೆನಪಿಸಿಕೊಂಡರು. ಕನ್ನಡದ ಸೂರ್ಯವಂಶ, ಜಿತೇಂದ್ರ ಸೇರಿದಂತೆ ಒಂದಷ್ಟು ತಮಿಳು ಚಿತ್ರಗಳಿಗೂ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಕೀರ್ತಿ ಗಂಗರಾಜುರದ್ದು. ಹಾಡಿಗೆ ನೃತ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಇಮ್ರಾನ್ ಸರ್ದಾರಿಯ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಇಷಾರನ್ನು ಹೊಗಳಿದರು.