Skip to content
FilmySphere

From the earlier FilmySphere, kept as published on 2014-11-01. It has not been updated.

Just Madveli teaser release

'ಜಸ್ಟ್ ಮದ್ವೇಲಿ' ಚಿತ್ರದ ಟೀಸರ್ ಬಿಡುಗಡೆ

ಕನ್ನಡಕ್ಕೆ ಹರೀಶ್ ಎಂಬ ಸದೃಢವಾದ ನಾಯಕರೊಬ್ಬರ ಆಗಮನವಾಗಿದೆ. ಜಸ್ಟ್ ಮದ್ವೇಲಿ ಎಂಬ ಚಿತ್ರಕ್ಕೆ ನಾಯಕನಾಗಿರುವ ಅವರೇ ಚಿತ್ರದ ನಿರ್ಮಾಣವನ್ನು ಕೂಡ ಮಾಡುತ್ತಿರುವುದು ವಿಶೇಷ. ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಹರೀಶ್ ಒಳ್ಳೆಯ ಬಾಡಿ ಬಿಲ್ಡರ್ ಕೂಡ ಹೌದು. ಹಾಗಾಗಿಯೇ ಆರಂಭದಲ್ಲೇ ಅವರಿಗೆ ಸದೃಢ ನಾಯಕನೆಂಬ ವಿಶೇಷಣ ನೀಡಿದ್ದೇವೆ.

ಮದುವೆ ಮನೆಗೆ ಬರುವ ಛಾಯಾಗ್ರಾಹಕನೊಬ್ಬ ತನ್ನ ಕ್ಯಾಮರಾ ಕಣ್ಣೊಳಗೆ ಸಿಕ್ಕು ಇಷ್ಟವಾದ ಹುಡುಗಿ ಮದುವೆ ಹೆಣ್ಣೇ ಎಂಬುದನ್ನು ತಿಳಿದುಕೊಳ್ಳುವಾಗ ತಡವಾಗಿರುತ್ತದೆ! ಆಕೆಯನ್ನು ಅಲ್ಲಿಂದ ಹಾರಿಸಿಕೊಂಡು ಹೋಗುವ ಆತ ಕ್ಲೈಮ್ಯಾಕ್ಸ್ ನಲ್ಲಿ ಏನು ಮಾಡುತ್ತಾನೆ ಎಂಬುದೇ ಚಿತ್ರದ ಸಸ್ಪೆನ್ಸ್ ಅಂಶ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕೋಲಾರ ಸೀನು. ಅವರು ಮೂಲತಃ ಆದರ್ಶ ಫಿಲ್ಮ್ ಇನ್ಟ್ಯೂಟ್ ವಿದ್ಯಾರ್ಥಿಯಾಗಿದ್ದು ಎಆರ್ ಬಾಬು, ಪಿಎನ್ ಸತ್ಯಾ, ನಾಗಣ್ಣ ಮೊದಲಾದ ನಿರ್ದೇಶಕರ ಜೊತೆ ಸಿನೆಮಾಗಳಲ್ಲಿ ಮತ್ತು ಬಿ.ಸುರೇಶ್, ಕಲಾಗಂಗೋತ್ರಿ ಮಂಜು ಮೊದಲಾದವರೊಂದಿಗೆ ಧಾರಾವಾಹಿಗಳಿಗೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರು ಸಹಜವಾಗಿ ತಮ್ಮ ಈ ಪ್ರಥಮ ಚಿತ್ರದ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಚಿತ್ರದ ನಾಯಕಿ ದೀಪಾ ರಣಬಿಕ್ರಮ, ಜ್ವಾಲಾ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಇದು ನಾಯಕಿಯಾಗಿ ತಮಗೆ ಪ್ರಥಮ ಚಿತ್ರವೆಂದರು. ಫೈಟ್ ಮಾಸ್ಟರ್ ಡಿಫರೆಂಟ್ ಡ್ಯಾನಿಗೆ ಜಿಮ್ನಾಸ್ಟಿಕ್ ಬಾಡಿಯ ಪ್ರಭಾಕರ್ ನಂಥ ನಾಯಕ ಸಿಕ್ಕಿದ್ದು ಖುಷಿಯಾದರೂ ಚಿತ್ರದಲ್ಲಿ ಒಂದೇ ಫೈಟ್ ಇರುವುದಕ್ಕೆ ಬೇಸರವಿದೆ! ಚಿತ್ರದ ಐದು ಹಾಡುಗಳನ್ನು ಆನಂದ್ ಎಡಿಯೂರು ಕೊರಿಯಾಗ್ರಫಿ ಮಾಡಿದ್ದಾರೆ. ಉಗ್ರಂ ಬಳಿಕ ರವಿ ಬಸ್ರೂರು ತಮ್ಮ ಚಿತ್ರಕ್ಕೆ ಸಂಗೀತ ನೀಡಿದ್ದಾರೆಂದು ಚಿತ್ರತಂಡ ತಿಳಿಸಿತು. ಭಜರಂಗಿ ಲೋಕಿ, ಬ್ಯಾಂಕ್ ಜನಾರ್ಧನ್ ಮೊದಲಾದವರ ತಾರಾಗಣ ಹೊಂದಿರುವ ಚಿತ್ರವನ್ನು ಬೆಂಗಳೂರು ಮೈಸೂರುಗಳಲ್ಲಿ ಚಿತ್ರೀಕರಿಸಿ ಪೂರ್ತಿಗೊಳಿಸಲಾಗಿದ್ದು, ಸದ್ಯದಲ್ಲೇ ಆಡಿಯೋ ರಿಲೀಸ್ ಮಾಡಲಾಗುವುದೆಂದು ತಂಡ ಮಾಹಿತಿ ನೀಡಿದೆ.