Skip to content
FilmySphere

From the earlier FilmySphere, kept as published on 2014-11-01. It has not been updated.

Kasturi Nivasa in colour

ಕಲರ್ ಫುಲ್ ಕಸ್ತೂರಿ ನಿವಾಸ

ಕನ್ನಡದಲ್ಲಿ ಡಾ.ರಾಜಕುಮಾರ್ ಅಭಿನಯಿಸಿದ ಎವರ್ ಗ್ರೀನ್ ಚಿತ್ರ ಕಸ್ತೂರಿ ನಿವಾಸ. 43 ವರ್ಷಗಳ ಹಿಂದೆ ಚಿತ್ರೀಕರಣಗೊಂಡ ಈ ಸಿನೆಮಾವನ್ನು ಇದೀಗ ಬಣ್ಣಕ್ಕೆ ಬದಲಾಯಿಸಲಾಗಿದೆ. ಆದರೆ ಇದು ಬರೇ ಬಣ್ಣದ ಮಾತುಗಳಲ್ಲ ಎಂಬುದನ್ನು ಸಾಬೀತುಪಡಿಸಲು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾಧ್ಯಮದ ಮುಂದೆ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಚಿತ್ರ ಇಷ್ಟು ದೊಡ್ಡಮಟ್ಟದಲ್ಲಿ ಯಶಸ್ಸಾಗುವ ಕಲ್ಪನೆಯಿರಲಿಲ್ಲ. ಮಂಜಿನ ಗೋಲಿಯನ್ನು ಉರುಳಿಸಿಕೊಂಡು ಹೋದಾಗ ಅದು ಮುಂದೆ ಗುಡ್ಡದಷ್ಟು ಬೆಳೆಯುವಂತೆ ನಮ್ಮ ಪರಿಸ್ಥಿತಿ ಎನ್ನಬಹುದು. ಆದರೆ ಮೂಲಕತೆಯ ಬಗ್ಗೆ ಅಂದು ನಾವಿಟ್ಟ ಭರವಸೆ ಮಾತ್ರ ಖಂಡಿತಾ ಸುಳ್ಳಾಗಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು ಚಿತ್ರದ ನಿರ್ದೇಶಕ ಭಗವಾನ್. ವಾಸ್ತವದಲ್ಲಿ ಇದು ಜಿ.ಬಾಲಸುಬ್ರಹ್ಮಣ್ಯಂ ಎಂಬ ತಮಿಳಿನ ಕತೆಗಾರ ಬರೆದ ಕತೆಯಾಗಿತ್ತು. ಅವರು ಇದನ್ನು ಶಿವಾಜಿ ಗಣೇಶನ್ ಗಾಗಿ ಬರೆದಿದ್ದರು. ಆದರೆ ಅವರಿಗೆ ಕತೆ ಇಷ್ಟವಾಗಿರಲಿಲ್ಲ. ಆದರೆ ಕತೆ ಕೇಳಿದ ರಾಜ್ ಸಹೋದರ ವರದಪ್ಪ ಮತ್ತು ಚಿ. ಉದಯಶಂಕರ್ ಇದನ್ನು ರಾಜ್ ಗೋಸ್ಕರ ಮಾಡುವಂತೆ ನಿರ್ದೇಶಕ ದೊರೆ-ಭಗವಾನ್ ರಿಗೆ ಸೂಚಿಸಿದರಂತೆ. ಆ ಕಾಲದಲ್ಲೇ ಒಂದುಲಕ್ಷ ವೆಚ್ಚದ ಮನೆ ಸೆಟ್ ಹಾಕಿಸಿ ಚಿತ್ರೀಕರಣ ಆರಂಭಿಸಿದ ಕೆಸಿಎನ್ ಗೌಡರು ಸ್ವಲ್ಪ ದಿನದೊಳಗೆ ಚಿತ್ರವನ್ನು ಬಣ್ಣದಲ್ಲಿ ತೆಗೆಯುವ ಮನಸ್ಸು ಮಾಡಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದರಂತೆ. ಆದರೆ ಮರುಚಿತ್ರೀಕರಣ ನಡೆಸಿ ದುಂದುವೆಚ್ಚ ಮಾಡುವುದೇಕೆ ಎಂಬ ರಾಜ್ ಸಲಹೆಯ ಮೇರೆಗೆ ಚಿತ್ರ 20 ದಿನದೊಳಗೆ ಕಪ್ಪು ಬಿಳುಪಿನಲ್ಲಿ ಪೂರ್ತಿಯಾಗಿತ್ತು. ಚಿತ್ರ ನೂರು ದಿನದ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದ ಹಾಗೆ ಅದರ ರಿಮೇಕ್ ಹಕ್ಕು ಪಡೆದುಕೊಂಡ ತಮಿಳಿಗರು ಚಿತ್ರವನ್ನು ಶಿವಾಜಿ ಗಣೇಶನ್ ನಾಯಕತ್ವದಲ್ಲಿ ಮಾಡಿದರೆಂಬುದು ಮತ್ತೊಂದು ವಿಶೇಷ. ಆದರೆ ಕೆಸಿಎನ್ ಗೌಡರಿಗೆ ಮಾತ್ರ ಚಿತ್ರವನ್ನು ಬಣ್ಣದಲ್ಲಿ ತರುವ ಆಸೆ ಹಾಗೆಯೇ ಉಳಿದಿತ್ತು. ಹಾಗಾಗಿ ಮತ್ತೆ ಚಿತ್ರವನ್ನು ಕಲರ್ ಮಾಡುವ ಪ್ರಯತ್ನ ಅವರ ಸಮ್ಮುಖದಲ್ಲೇ ನಡೆಯಿತು. ಆದರೆ ಅವರು ನಿಧನರಾದ ಮೇಲೆ ಮತ್ತೆ ಚಿತ್ರಕ್ಕೆ ಚಾಲನೆ ನೀಡಿದ ಅವರ ಪುತ್ರ ಕೆಸಿಎನ್ ಮೋಹನ್ ಇದೀಗ ತಂದೆಯ ಕನಸನ್ನು ನನಸುಮಾಡುವಲ್ಲಿ ಯಶಸ್ಸಾಗಿದ್ದಾರೆ. ಚಿತ್ರ ಇದೇ ನವೆಂಬರ್ ಏಳರಂದು ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲೇ ಪ್ರದರ್ಶನಗೊಳ್ಳಲಿದೆ. ಚಿತ್ರವನ್ನು ಬಣ್ಣಗೊಳಿಸುವ ಮೂಲಕ ತಮ್ಮ ಪ್ರತಿಭೆ ತೋರಿಸಿರುವ ಗುರು ಗೌತಮ್ ಇನ್ಫೋಟೆಕ್ ನ ಸುಂದರ್ ರಾಜ್ ತಮ್ಮ ಪಾರ್ಟ್ನರ್ಸ್ ಪ್ರದೀಪ್ ಶಾ ಮತ್ತು ಷಣ್ಮುಗಂ ಜೊತೆಗೆ 60 ಮಂದಿ ತಂತ್ರಜ್ಞರ ಸಹಾಯದೊಂದಿಗೆ ಒಂದೂವರೆ ವರ್ಷದಲ್ಲಿ ಚಿತ್ರದ ಬಣ್ಣವನ್ನೇ ಬದಲಾಯಿಸಿದ ಕತೆ ಹೇಳಿದರು. ಚಿತ್ರಕ್ಕೆ ಅಭಿಮಾನಿಗಳ ಅಭೂತಪೂರ್ವ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ.