Skip to content
FilmySphere

From the earlier FilmySphere, kept as published on 2014-10-31. It has not been updated.

Belli Movie Review

ಬೆಳ್ಳಿ ಚಿತ್ರ ವಿಮರ್ಶೆ

ಮಚ್ಚು ಬೆಳ್ಳಿ; ಶಿವಣ್ಣ ಬಂಗಾರ!

ಚಿತ್ರದ ನಾಯಕ ಹಳ್ಳಿಯಿಂದ ನಗರಕ್ಕೆ ಬಂದು ದುಡ್ಡಿಗೋಸ್ಕರ ಮಚ್ಚು ಹಿಡಿಸಿಕೊಂಡವನು. ರೌಡಿಗಳೊಂದಿಗಿನ ಹೊಡೆದಾಟದಲ್ಲಿ ತಲೆಗೇಟಾಗಿ ಹುಚ್ಚು ಹಿಡಿಸಿಕೊಂಡವನು. ಆದರೆ ಇದರ ಹಂತ ಹಂತವಾದ ಕತೆಯನ್ನು ನಾಯಕನ ರೌಡಿ ತಂಡದ ಒಬ್ಬೊಬ್ಬರಿಂದಲೇ ತಿಳಿದುಕೊಳ್ಳುವ ಬರಹಗಾರ್ತಿಯ ಮೂಲಕ ಕತೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಹಾಗೆ ಕರ್ನಾಟಕದ ಪ್ರಥಮ ಮಹಿಳಾ ಐಎಎಸ್ ಅಧಿಕಾರಿಯೆನಿಸುವಾಕೆಗೂ ಬೆಳ್ಳಿಗೂ ಇರುವ ಸಂಬಂಧವನ್ನು ಕೂಡ ತಿಳಿದುಕೊಳ್ಳುತ್ತಾಳೆ. ಪೊಲೀಸ್ ಅಧಿಕಾರಿಯಾಗಿರುವ ಆಕೆಯ ಅಣ್ಣ ಆಕೆಯ ಪ್ರಿಯಕರನಾಗಿದ್ದ ಬಸವ ಎಂಬ ಬೆಳ್ಳಿಯನ್ನು ಎನ್ ಕೌಂಟರ್ ಮಾಡಿರುವುದಾಗಿ ಲೋಕಕ್ಕೆ ಹೇಳಿರುತ್ತಾನೆ. ಹಾಗಾಗಿ ಬೇರೆ ಮದುವೆಯ ಬಗ್ಗೆ ಆಕೆ ಯೋಚಿಸಿರುವುದಿಲ್ಲ. ಆದರೆ ಹುಚ್ಚನಾಗಿ ಮರೆವಿನ ರೋಗಕ್ಕೊಳಗಾದ ಬೆಳ್ಳಿಗೆ ಸಮಾರಂಭವೊಂದರಲ್ಲಿ ಈಕೆಯ ಭಾಷಣ ಹಳೆಯದನ್ನೆಲ್ಲ ನೆನಪಿಸುತ್ತದೆ. ಆಮೇಲೇನಾಗುತ್ತದೆ? ಬೆಳ್ಳಿ ಆಕೆಯ ಬಳಿಗೆ ಹೋಗುತ್ತಾನ? ಪ್ರೇಮಿಗಳು ಒಂದಾಗುತ್ತಾರ? ಅಥವಾ ನಿಜಕ್ಕೂ ಎನ್ ಕೌಂಟರ್ ಆಗಿಬಿಡುತ್ತಾನ ಎಂಬುದಕ್ಕೆ ಉತ್ತರವನ್ನು ತೆರೆಯ ಮೇಲೆ ನೋಡಬಹುದು.

ಚಿತ್ರದ ಪೋಸ್ಟರ್ ಗಳಲ್ಲಿರುವಂತೆ ಪರದೆಯ ಮೇಲೆಯೂ ಮಚ್ಚುಗಳಿಗೆ ಕೊರತೆಯಿಲ್ಲ. ಬೆಳ್ಳಿತಟ್ಟೆಯಲ್ಲಿ ಊಟ ಮಾಡಿದ್ದಕ್ಕಾಗಿ ಶಿವರಾಜ್ ಪಾತ್ರಕ್ಕೆ ಬೆಳ್ಳಿ ಎಂಬ ಹೆಸರು ಬರುವುದೆಂದು ತಿಳಿಸಲಾಗಿದೆ. ಆದರೆ ಚಿತ್ರದಲ್ಲಿ ಬೆಳ್ಳಿಗಿಂತ ಮಚ್ಚುಗಳ ಹೊಳಪೇ ಹೆಚ್ಚು. ಹುಚ್ಚನಾಗಿ ಶಿವಣ್ಣನ ಬಂಗಾರದಂಥ ನಟನೆಯಿರದಿದ್ದಲ್ಲಿ ಇದು ಕೂಡ ಒಂದು ಸಾಧಾರಣ ರೌಡಿಸಂ ಚಿತ್ರವಾಗಿಬಿಡುತ್ತಿತ್ತು. ಯಾಕೆಂದರೆ ಇಲ್ಲಿಯೂ ಜೋಗಿ ಚಿತ್ರದ ದಟ್ಟವಾದ ಪ್ರಭಾವವನ್ನು ಕಾಣಬಹುದು. ಉದಾಹರಣೆಗೆ ತಾಯಿಯನ್ನು ಬಿಟ್ಟು ಹಳ್ಳಿಯಿಂದ ನಗರ ಸೇರುವ ನಾಯಕ ರೌಡಿಸಂಗಿಳಿಯುವುದು. ಆತನನ್ನು ಹುಡುಕಿಕೊಂಡು ಬರುವ ತಾಯಿ ಆತನ ಪತ್ತೆಗಾಗಿ ಪೋಸ್ಟರ್ ಹಚ್ಚಿ ಕಾಯುವುದು, ಮಾತ್ರವಲ್ಲ ಇಲ್ಲಿಯೂ ಬರಹಗಾರ್ತಿಯೊಬ್ಬಳ ಮೂಲಕವೇ ನಾಯಕನ ಕತೆ ಬಿಚ್ಚಿಟ್ಟುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿಯೇ ತಾಯಿಯಾಗಿ ಪದ್ಮಾ ವಾಸಂತಿ, ಕತೆಗಾರ್ತಿ ಸುಧಾರಾಣಿಯ ಪಾತ್ರಗಳು ವಿಶೇಷವೆನಿಸುವುದಿಲ್ಲ. ಆದರೆ ನಾಯಕಿಯಾಗಿ ಕೃತಿಕರಬಂದಳದ್ದು ಹೊಸಥರ ಬಂಧ. ಆರಂಭದ ಚೆಲ್ಲು ಬಳಿಕದ ಐಎಎಸ್ ಶಿಸ್ತಿನಲ್ಲೂ ಗೆಲ್ಲುವ ಚೆಲುವು ಮತ್ತು ನಟನೆ. ನಾಯಕನ ಗೆಳೆಯರಾಗಿ ನಟಿಸಿರುವ ನಾಲ್ಕು ಮಂದಿಗೂ ಸೀಮಿತ ಅವಕಾಶ. ಕಾಲೇಜು ಹುಡುಗನಾಗಿ ರಿಸಲ್ಟ್ ನೋಡುವ ಶಿವಣ್ಣ, ಗುರುದತ್ ಕುಳಿತುಕೊಳ್ಳುವ ಮಚ್ಚಿನ ಸಿಂಹಾಸನ ಮೊದಲಾದವು ನಿರ್ದೇಶಕರ ಸೆನ್ಸ್ ರಹಿತ ಕನಸುಗಳಿಗೆ ಉದಾಹರಣೆ! ಒಟ್ಟಿನಲ್ಲಿ ಗಜನಿ ಚಿತ್ರದಂತೆ ಟೆಂಪರರಿ ಮೆಮೊರಿ ಲಾಸ್ ಕ್ರಿಮಿನಲ್ ಆದರೂ ಅದಕ್ಕಿಂತ ಭಿನ್ನ,ತೀರಾ ನೈಜ ಹುಚ್ಚನಾಗಿ ನಿರ್ಭಾವುಕ ಕಣ್ಣುಗಳಿಂದ, ಅಂಕೆಯಲ್ಲಿರದಂಥ ಜೊಲ್ಲಿನಿಂದ ಮನಸ್ಸು ತಟ್ಟಿ ನಿಲ್ಲುತ್ತಾರೆ ಶಿವರಾಜ್. ಅದರಿಂದಾಗಿಯೇ ನಿರ್ದೇಶಕರು ಚಿತ್ರಕ್ಕೆ ಕಾಡುವ ಎಂಡಿಂಗ್ ನೀಡಲೆತ್ನಿಸಿದರೂ ಶಿವಣ್ಣನ ಪಾತ್ರವೊಂದೇ ಕಾಡುವಂತೆ ಉಳಿದುಬಿಡುತ್ತದೆ.