Skip to content
FilmySphere

From the earlier FilmySphere, kept as published on 2014-09-29. It has not been updated.

Belli Audio Released

ಬೆಳ್ಳಿ ಆಡಿಯೋ ಬಿಡುಗಡೆ

Kannada

ಶಿವರಾಜ್ ಕುಮಾರ್ ಚಿತ್ರದಲ್ಲಿ ಮಚ್ಚೊಂದನ್ನು ಹಿಡಿದರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಅಂಥ ಸಂದರ್ಭದಲ್ಲಿ ಐದು ಅಗಲುಗಳ ಗೊಂಚಲು ಮಚ್ಚನ್ನು ಕೈಲಿರಿಸಿಕೊಂಡ ಶಿವಣ್ಣನನ್ನು ಬೆಳ್ಳಿ ಚಿತ್ರದ ಪೋಸ್ಟರ್ ನಲ್ಲಿ ಕಂಡ ಅಭಿಮಾನಿಗಳ ಪರಿಸ್ಥಿತಿ ಹೇಗಿರಬೇಡ? ಅದಕ್ಕೆ ಕನ್ನಡಿಯಂತಿತ್ತು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಳ್ಳಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ.

ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ನಾಲ್ಕು ಮಂದಿ ಆತ್ಮೀಯ ಹುಡುಗರಿರುತ್ತಾರೆ. ಆ ಪಾತ್ರಗಳನ್ನು ನಿರ್ವಹಿಸಿದ ಯುವ ನಾಯಕರು ವೇದಿಕೆಗೆ ಬಂದು ತಮ್ಮ ಪಾತ್ರಗಳ ಪರಿಚಯ ಮಾಡಿಕೊಂಡರು. ಪೂಜಾರಿ ಹೆಸರಿನಲ್ಲಿ ವೆಂಕಟೇಶ್ ಪ್ರಸಾದ್, ಮುಸ್ಲಿಂ ಯುವಕನಾಗಿ ಶಿಷ್ಯ ದೀಪಕ್, ಕೋತಿ ಸೀನನಾಗಿ ಒರಟ ಪ್ರಶಾಂತ್ ಮತ್ತು ಕಠಾರಿ ಬಾಬುವಾಗಿ ವಿನೋದ್ ಪ್ರಭಾಕರ್ ಮಾತನಾಡಿದರು. ಅದರಲ್ಲೂ ವಿನೋದ್ ಪ್ರಭಾಕರ್ 'ಹುಲಿ ಬಂಡೀಪುರದಲ್ಲಿದ್ರೇನು..ಬನ್ನೇರುಘಟ್ಟದಲ್ಲಿದ್ರೇನು ಹುಲಿ ಹುಲೀನೆ' ಎಂಬ ಡೈಲಾಗ್ ಹೇಳಿದಾಗ ಸಭೆಯಲ್ಲಿ ಸಿಳ್ಳೆಗಳ ಸುರಿಮಳೆಯಾಯಿತು. ಚಿತ್ರದಲ್ಲಿ ಖಳನಾಯಕನಾಗಿ ನಟಿಸುತ್ತಿರುವ ಆದಿ ಲೋಕೇಶ್ ಮಾತನಾಡಿ ಜೋಗಿಯ ಬಿಡ್ಡನನ್ನು ಮೀರಿಸುವಲ್ಲಿ ಚಿತ್ರದಲ್ಲಿ ತಾನು ನಟಿಸಿರುವ ತಬ್ಲಿ ಮಂಜ ಎಂಬ ಪಾತ್ರ ಯಶಸ್ವಿಯಾಗಬಹುದೆಂಬ ನಿರೀಕ್ಷೆ ವ್ಯಕ್ತಪಡಿಸಿದರು. ನಾಯಕಿ ಕೃತಿ ಕರಬಂಧ ಚಿತ್ರದಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರದ ಹೆಸರು ಸ್ನೇಹ ಎಂದರು. ಚಿತ್ರದ ಹಾಡುಗಳಿಗೆ ಸಂಗೀತ ನೀಡಿರುವ ಶ್ರೀಧರ್ ಸಂಭ್ರಮ್ ಶಿವಣ್ಣನ ಚಿತ್ರಕ್ಕೆ ಸಂಗೀತ ನೀಡಲು ಸಾಧ್ಯವಾದ ಸಂಭ್ರಮ ಹಂಚಿಕೊಂಡರು. ಸಾಹಿತ್ಯ ರಚಿಸಿರುವ ಕವಿರಾಜ್ ಹಾಡಿಗೆ ಯಶಸ್ವಿ ಪಲ್ಲವಿಯನ್ನು ಸ್ವತಃ ಶ್ರೀಧರ್ ಬರೆದುಕೊಟ್ಟಿದ್ದಾರೆಂದರು. ಮತ್ತೋರ್ವ ಗೀತೆ ರಚನೆಕಾರ ನಾಗೇಂದ್ರ ಪ್ರಸಾದ್ ತಾವು ಶಿವಣ್ಣನ ಚಿತ್ರಕ್ಕೆ ರಚಿಸಿರುವ ಭಕ್ತಿ ಪ್ರಧಾನ ಹಾಡುಗಳಾದ ಎಲ್ಲಾ ನೀನೇ ತಾಯಿ ಮತ್ತು ಜೈ ಜೈ ಜೈ ಜೈ ಭಜರಂಗೀ ಹಾಡುಗಳು ದೇವಾಲಯಗಳಲ್ಲಿ ಕೇಳಿ ಬರುತ್ತಿದ್ದು ಅದೇ ಸಾಲಿಗೆ ಸೇರುವ ಹಾಡೊಂದನ್ನು ಇಲ್ಲಿಯೂ ನೀಡಿದ್ದಾಗಿ ಹೇಳಿದರು. ಕೊನೆಯಲ್ಲಿ ವೇದಿಕೆ ಏರಿ ಮಾತನಾಡಿದ ಶಿವರಾಜಕುಮಾರ್ ಚಿತ್ರ ತುಂಬಾ ವೇಗದ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ಎಲ್ಲಿಯೂ ಬೆಳ್ಳಿ ತನ್ನ ಬಗ್ಗೆ ತಾನು ಹೇಳಿಕೊಳ್ಳುವುದಿಲ್ಲ, ಇನ್ನೊಬ್ಬರು ಹೇಳುತ್ತಾರೆ ಎಂದರು. ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ, ವಿತರಕರಾದ ನಾಗಪ್ರಸಾದ್, ಕೆಪಿ ಶ್ರೀಕಾಂತ್, ಗೀತಾ ಶಿವರಾಜಕುಮಾರ್,ಶಿವಣ್ಣನ ತಾಯಿಯಾಗಿ ನಟಿಸಿರುವ ಪದ್ಮಾ ವಾಸಂತಿ ಮೊದಲಾದವರು ಅತಿಥಿಗಳಾಗಿದ್ದ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಆಡಿಯೋ ಸೀಡಿ ಬಿಡುಗಡೆಗೊಳಿಸಿದರು. ತಾನು ಇಲ್ಲಿಗೆ ರಾಜಕಾರಣಿಯಾಗಿ ಬಂದಿಲ್ಲ; ಓರ್ವ ಶಿವರಾಜಕುಮಾರ್ ಅಭಿಮಾನಿಯಾಗಿ ಬಂದಿದ್ದೇನೆ ಎಂದರು. ನಿರ್ದೇಶಕ ಮುಸ್ಸಂಜೆ ಮಹೇಶ್ ಮಾತನಾಡಿ "ಡಿಕೆ ಶಿವಕುಮಾರ್ ರನ್ನು ಮೊದಲು ಆಹ್ವಾನಿಸಿದಾಗ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿರಲಿಲ್ಲ. ಆದರೆ ಶಿವಣ್ಣ ನಾಯಕನೆಂದಾಗ ತಕ್ಷಣ ಒಪ್ಪಿಕೊಂಡರು" ಎಂದರು. ಚಿತ್ರದ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡದಿದ್ದರೂ ಅಲ್ಲಿ ಪ್ರದರ್ಶಿಸಲಾದ ಟ್ರೇಲರ್ ಮತ್ತು ಹಾಡುಗಳು ಬೆಳ್ಳಿಯ ಬಗ್ಗೆ ಆಕರ್ಷಣೆ ಮತ್ತು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿತ್ತು.