Skip to content
FilmySphere

From the earlier FilmySphere, kept as published on 2014-09-30. It has not been updated.

Title for Movie Basavana

ಉಪ್ಪಿಯ ಮೂರು ನಾಮ!

Kannada

ಉಪೇಂದ್ರ ನಿರ್ದೇಶನದ ಚಿತ್ರಗಳ ಸೊಗಸು ನಟನೆಯ ಚಿತ್ರಗಳಲ್ಲೂ ಇದೆಯೆಂದು ಥಿಯೇಟರ್ ಗೆ ಹೋದವರು ಹಾಕಿಸಿಕೊಂಡ ಮೂರುನಾಮದ ಕತೆ ಇದಲ್ಲ. ಬಸವಣ್ಣ ಎಂಬ ಹೆಸರಿಟ್ಟುಕೊಂಡು ಅದರ ವಿರುದ್ಧ ಪ್ರಕರಣ ದಾಖಲಾದ ಮೇಲೆ ನಿರ್ದೇಶಕ ಶ್ರೀನಿವಾಸ ರಾಜು ಬದಲಾಯಿಸಿಕೊಂಡ ಸಿಂಬಲ್ ಅದು. ಶಿವನ ಹಣೆಯ ಮೇಲಿನ ಮೂರು ಪಟ್ಟಿಯ ವಿಭೂತಿ ನಡುವೆ ಇರುವ ಕಣ್ಣಿನ ಚಿತ್ರವಾದರೂ ತಾನು ಚಿತ್ರವನ್ನು ಬಸವಣ್ಣ ಎಂದೇ ಕರೆಯುವುದಾಗಿ ಶ್ರೀನಿವಾಸ್ ಪಟ್ಟು ಹಿಡಿದರು. ಇದೆಲ್ಲ ನಡೆದಿದ್ದು ಇತ್ತೀಚೆಗೆ ನಡೆದ ಚಿತ್ರದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ.

ಮೊದಲು ಮಾತನಾಡಿದ ತನ್ವಿ ಫಿಲಮ್ಸ್ ಬ್ಯಾನರ್ ನ ನಿರ್ಮಾಪಕ ಸಿ.ಆರ್ ಮನೋಹರ್ "ಉಪ್ಪಿ ಮತ್ತು ನಿರ್ದೇಶಕರಿಂದಾಗಿ ಚಿತ್ರ ಚೆನ್ನಾಗಿದೆ. ಗ್ಲಾಮರಸ್ ರಾಗಿಣಿ ಮತ್ತು ಕ್ಯೂಟ್ ಸಲೋನಿ ಚಿತ್ರಕ್ಕೆ ಕಳೆ ನೀಡಿದ್ದಾರೆ ಎಂದರು. ಬಳಿಕ ಮಾತನಾಡಿದ ರಾಗಿಣಿ ಇದು ಕನ್ನಡದ ಅತಿ ದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾಗಲಿದೆ ಎಂದರು. ತನ್ನದು ಎರಡು ವಿಭಿನ್ನ ಗೆಟಪ್ ನಲ್ಲಿರುವ ಮಾಫಿಯಾ ಸಂಬಂಧಿತ ಪಾತ್ರ. ನಾಯಕ ಮತ್ತು ನನ್ನ ಪಾತ್ರಗಳು ಕ್ಲೈಮ್ಯಾಕ್ಸ್ ನಲ್ಲಿ ಸರ್ ಪ್ರೈಸ್ ನೀಡಲಿದೆ ಎಂದರು. ಉಪ್ಪಿ ಫೆಂಟಾಸ್ಟಿಕ್ ಹ್ಯೂಮನ್. ಚಿತ್ರದಲ್ಲಿ ಕಲಾವಿದನಷ್ಟೇ ಆಗಿದ್ದರೂ ಪ್ರತಿ ದೃಶ್ಯಕ್ಕೂ ಮುನ್ನ ನಮಗೆ ಎನ್ ಕರೇಜ್ ನೀಡುತ್ತಿದ್ದುದನ್ನು ಮರೆಯಲಾಗದು. ಪ್ರಥಮ ಬಾರಿಗೆಂಬಂತೆ ನಾಯಕನೊಂದಿಗೆ ಸೇರಿ ನಾನು ಹೊಡೆದಾಟದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ರಾಗಿಣಿ. ಸಲೋನಿ ತಮಗೆ ಇದು ಉಪೇಂದ್ರರ ಜೊತೆ ಮೂರನೇ ಸಿನೆಮಾ. ಸಂಪ್ರದಾಯಸ್ಥೆ ಹುಡುಗಿಯ ಪಾತ್ರವಿದೆ ಎಂದರು. ರಿಯಲ್ ಸ್ಟಾರ್ ಉಪೇಂದ್ರ ಕೂಡ ತಮ್ಮ ಮಾತುಗಳಲ್ಲಿ ಸಲೋನಿಯ ಬಗ್ಗೆಯೇ ಪ್ರಸ್ತಾಪಿಸಿ 'ಪರ್ಫಾರ್ಮೆನ್ಸ್ ಓರಿಯೆಂಟೆಡ್ ನಟಿ ಸಲೋನಿ. ಅದಕ್ಕಾಗಿಯೇ ಆಕೆಯನ್ನು ಮತ್ತೆ ಮತ್ತೆ ಮುಂಬೈನಿಂದ ಕರೆಸಲಾಗುತ್ತಿದೆ ಎಂದರು. ವೆಚ್ಚವನ್ನು ಗಮನಿಸುತ್ತಿದ್ದರೆ ನನಗೆ ತೆಲುಗು ಚಿತ್ರದಲ್ಲಿ ನಟಿಸಿದ ಅನುಭವವಾಗುತ್ತಿತ್ತು. ಚಿತ್ರದ ಪ್ರಥಮ ಆಕರ್ಷಣೆಯಾಗಿರುವುದೇ ಗುರುರಾಜ್ ದೇಸಾಯಿ ಬರೆದ ಸಂಭಾಷಣೆಗಳು ಎಂದು ಹೊಸ ಸಂಭಾಷಣೆಕಾರರನ್ನು ಕೊಂಡಾಡಿದರು. ಅದೇ ಮಾತನ್ನು ಸಮರ್ಥಿಸಿದ ನಟ ದೊಡ್ಡಣ್ಣ, ನನ್ನ 600 ಚಿತ್ರಗಳ ಅನುಭವದಲ್ಲಿ ಹೇಳುತ್ತೇನೆ, ಇದು ತುಂಬಾನೇ ಖುಷಿ ಕೊಡುವ ಚಿತ್ರವಾಗಿ ಮೂಡಿ ಬಂದಿದೆ ಎಂದರು. ನಿರ್ಮಾಪಕರ ಸಹೋದರ ಗೋಪಿ ನವನಟನಾದರೂ ಅದ್ಭುತ ಅಭಿನಯ ನೀಡಿದ್ದಾರೆ ಎಂದರು. ಪ್ರಾಚೀನ ದೇವಾಲಯಗಳಲ್ಲಿ ಚಿತ್ರೀಕರಿಸಿರುವುದು, ವೇದದ ವಾದಗಳಿಗೆ ಗುರುರಾಜ್ ಸಂಭಾಷಣೆ ನೀಡಿರುವುದು ಚಿತ್ರಕ್ಕೆ ವಿಭಿನ್ನ ಆಕರ್ಷಣೆ ಒದಗಿಸಿದೆ ಎಂದರು. ನಿರ್ದೇಶಕ ಶ್ರೀನಿವಾಸ ರಾಜು ಈ ಚಿತ್ರ ಇಷ್ಟೊಂದು ಚೆನ್ನಾಗಿ ಮೂಡಿ ಬರಲು ನಿರ್ಮಾಪಕರು ಮತ್ತು ಉಪ್ಪಿಯೇ ಕಾರಣರಾಗುತ್ತಾರೆ. ಬೆಳಿಗ್ಗೆ 4ಗಂಟೆಗೆ ಎದ್ದು ಎಂಟರ ತನಕ ತಮ್ಮ ವಿಭಿನ್ನ ಗೆಟಪ್ ಗಾಗಿ ಮೇಕಪ್ ನಲ್ಲಿ ನಿರತರಾಗಿರುತ್ತಿದ್ದ ಉಪೇಂದ್ರರ ಡೆಡಿಕೇಶನನ್ನು ವಿವರಿಸಲು ಮಾತುಗಳಿಲ್ಲ ಎಂದರು.