From the earlier FilmySphere, kept as published on 2014-09-30. It has not been updated.
Ring Road Shobha Audio Review
ರಿಂಗ್ ರೋಡ್ ಶುಭಾಳ ಹಾಡಿನ ರಿಂಗಣ
Kannada
ಚಿತ್ರದ ಎಲ್ಲ ವಿಭಾಗದಲ್ಲಿಯೂ ಮಹಿಳೆಯರೇ ಕಾರ್ಯನಿರ್ವಹಿಸುತ್ತಿರುವರೆಂಬ ವಿಶಿಷ್ಟತೆಯ ಚಿತ್ರ ರಿಂಗ್ ರೋಡ್ ಶುಭ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಆ ನಿಟ್ಟಿನಲ್ಲಿ ವೀಕ್ಷಕರಿಂದ ಯಾವುದೇ ಉದಾರತೆಯನ್ನು ಬಯಸದಂಥ ಚಿತ್ರವಿದು. ಯಾಕೆಂದರೆ ಇದುವರೆಗೆ ಪ್ರಕಟಗೊಂಡಿರುವ ಪ್ರೊಮೊಗಳಲ್ಲಾಗಲೀ ಅಥವಾ ಪತ್ರಿಕಾಗೋಷ್ಠಿಯಲ್ಲಿನ ತಂಡದ ಕಾರ್ಯವೈಖರಿಯಲ್ಲಾಗಲೀ ಎಲ್ಲಿಯೂ ಪ್ರಥಮ ಚಿತ್ರದಲ್ಲಿ ಸಹಜವೆನಿಸಬಹುದಾದಂಥ ಕುಂದುಗಳನ್ನು ಕೂಡ ತೋರಿಸಿದ ಉದಾಹರಣೆಯಿಲ್ಲ. ಅದೇ ರೀತಿಯಲ್ಲಿ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮವೂ ಜರಗಿತು.
ವಾಣಿಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಐದು ಹಾಡುಗಳನ್ನೊಳಗೊಂಡ ಧ್ವನಿಸಾಂದ್ರಿಕೆಯನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಬಿಡುಗಡೆಗೊಳಿಸಿದರು.ಚಿತ್ರಕ್ಕಾಗಿ ಒಂದು ರೂಪಾಯಿ ಸಂಭಾವನೆ ಪಡೆದು ವಿಭಿನ್ನ ಪಾತ್ರವೊಂದರಲ್ಲಿ ನಟಿಸುತ್ತಿರುವ ವಿಜಯ್ ಮಾತನಾಡುತ್ತ 'ಚಿತ್ರದ ನಿರ್ದೇಶಕಿ ಹುಲಿಯಾದರೆ, ಛಾಯಾಗ್ರಾಹಕಿ ಲಯನೆಸ್. ಅಷ್ಟು ಪವರ್ ಫುಲ್ ಆಗಿದ್ದ ಅವರನ್ನು ನಾನು ಚಿತ್ರೀಕರಣದ ವೇಳೆ ಹಾಗೆಯೇ ಕರೆಯುತ್ತಿದ್ದೆ. ಇದೊಂದು ಮಾದರಿ ಚಿತ್ರವಾಗಿದ್ದು ಎಲ್ಲ ಭಾಷೆಗಳನ್ನು ತಲುಪುವಂತಾಗಲಿ' ಎಂದರು. ನಿಖಿತಾ ಟುಕ್ರಾಲ್ ಮಾತನಾಡುತ್ತಾ 'ಚಿತ್ರಕತೆ ಅದ್ಬುತವಾಗಿದೆ. ಈ ಚಿತ್ರದಲ್ಲೊಂದು ಭಾಗವಾಗಲು ಸಾಧ್ಯವಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತದೆ. ಪ್ರಿಯಾ ಬೆಳ್ಳಿಯಪ್ಪ ನನ್ನ ಬಾಯ್ ಫ್ರೆಂಡ್ ಎಂದು ಹೇಳಿ ಒಂದು ಆಕೆಗೊಂದು ಮುತ್ತು ಕೊಟ್ಟರು. ಅತಿಥಿಯಾಗಿ ಆಗಮಿಸಿ ಮಾತನಾಡಿದ ಸಂಜನಾ 'ನಾನೊಬ್ಬಳು ಫೆಮಿನಿಸ್ಟ್. ಹೆಣ್ಣು ಮಕ್ಕಳೇ ಸದಾ ಮುಂದಿರಬೇಕೆಂದು ಬಯಸುವವಳು ನಾನು. ಹಾಗಾಗಿ ಈ ಚಿತ್ರಕ್ಕೆ ನನ್ನ ನೂರರಷ್ಟು ಬೆಂಬಲವಿದೆ ಎಂದರು. ಪಟ್ರೆ ಅಜಿತ್ ಮಾತನಾಡಿ ಚಿತ್ರದಲ್ಲಿ ಪಕ್ಕಾ ಸಸ್ಪೆನ್ಸ್ ಸನ್ನಿವೇಶಗಳಿವೆ. ನಾನು ಕೂಡ ಥಿಯೇಟರ್ ಗೆ ಹೋಗಿ ಚಿತ್ರ ನೋಡಲು ಕಾಯುತ್ತಿದ್ದೇನೆ ಎಂದರು. ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಕಾಣಿಸಿರುವ ಲವ್ಲಿಸ್ಟಾರ್ ಪ್ರೇಮ್ ಮಾತನಾಡಿ 'ನಿರ್ದೇಶಕಿ ಪ್ರಿಯಾ ಸೇರಿದಂತೆ ಚಿತ್ರ ತಂಡದ ರಂಜಿನಿ, ರೇಖಾಮ್ಮ, ನಿಖಿ, ಸಂಜನಾ ಎಲ್ಲರೂ ನನ್ನ ಸ್ನೇಹಿತೆಯರು. ಪ್ರಿಯಾರಲ್ಲಂತೂ ಅವರು ಯಾವ ಚಿತ್ರ ಮಾಡಿದರೂ ಅದರಲ್ಲೊಂದು ಪಾತ್ರವನ್ನು ನನಗೆ ನೀಡಬೇಕೆಂದು ಅಗ್ರಿಮೆಂಟ್ ಮಾಡಿಕೊಂಡಿದ್ದಾಗಿ ಹೇಳಿದರು. ವಿಶೇಷವೇನೆಂದರೆ ಚಿತ್ರದಲ್ಲಿ ಪ್ರೇಮ್ ನಟಿಸಿರುವ ಗೀತೆಗೆ ಕಿಚ್ಚ ಸುದೀಪ್ ಕಂಠನೀಡಿದ್ಧಾರೆ! ಉಳಿದಂತೆ ಖುದ್ದು ವಾಣಿ ಹರಿಕೃಷ್ಣ, ಸಂತೋಷ್ ವೆಂಕಿ, ಲಕ್ಷ್ಮೀ ವಿಜಯ್, ಹರಿಕೃಷ್ಣ ಮತ್ತು ಸಂಗೀತ ಕಟ್ಟಿ ದನಿಯಲ್ಲಿ ಹಾಡುಗಳಿವೆ. ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಸೇರಿದಂತೆ ಇಡೀ ಮಹಿಳಾ ಚಿತ್ರತಂಡ ವೇದಿಕೆಯಲ್ಲಿತ್ತು. ನಟ ಸುನೀಲ್ ಪುರಾಣಿಕ್, ನಟಿ ಹಂಸ ಮೊದಲಾದವರು ಸಭೆಯಲ್ಲಿದ್ದರು.