From the earlier FilmySphere, kept as published on 2014-09-30. It has not been updated.
Muddhu Manase Audio will be released by BOSS
ಮುದ್ದು ಮನಸೇ ಸೀಡಿ ಬಿಡುಗಡೆಗೊಳಿಸಲಿರುವ ಬಾಸ್!
Kannada
ನಮ್ಮ ಸೀಡಿ ಬಿಡುಗಡೆಗೊಳಿಸಲು 'ಬಾಸ್' ಬರುತ್ತಾರೆ ಎಂದು 'ಮುದ್ದು ಮನಸೇ' ಚಿತ್ರತಂಡ ಹೇಳಿದಾಗ ಇವರು ಬಹುಶಃ ಬಿಗ್ ಬಾಸ್ ನಿರ್ವಹಿಸುತ್ತಿರುವ ಸುದೀಪೇ ಇರಬಹುದು ಎಂದುಕೊಳ್ಳಲಾಗಿತ್ತು. ಚಿತ್ರತಂಡ ತಯಾರಿಸಿರುವ ಜಾಹಿರಾತು ತುಣುಕಿನಲ್ಲಿ ಸ್ವತಃ ಸುದೀಪ್ ಕೂಡ 'ಬಾಸ್ ಬರುತ್ತಾರೆ' ಎಂದಾಗ ಆ ಕ್ಷಣ ಹುಬ್ಬೇರುವಂತಾಗಿದ್ದು ಸತ್ಯ. ಉಳಿದಂತೆ ಬಾಸ್ ಚಿತ್ರದಲ್ಲಿ ನಟಿಸಿದ ದರ್ಶನ್ ಇರಬಹುದೇ ಎಂಬ ಸಂದೇಹವೂ ಮೂಡದಿರಲಿಲ್ಲ. ಜೊತೆಗೆ ತೆರೆಯ ಮೇಲೆ ಕಾಣಿಸಿಕೊಂಡ ದರ್ಶನ್ ಉಳಿದ ಕಲಾವಿದರಂತೆ ಬಾಸ್ ಬರುವ ಬಗ್ಗೆ ಯಾವುದೇ ಮಾತುಗಳನ್ನಾಡದಿರುವುದು ಕೂಡ ಅದಕ್ಕೆ ಮುಖ್ಯ ಕಾರಣವಾಗಿತ್ತು. ಆದರೆ ಯಾವಾಗ ಶಿವರಾಜಕುಮಾರ್ ಮತ್ತು ಅಂಬರೀಶ್ ಕೂಡ 'ನಾವು ಅವರನ್ನು ಬಾಸ್ ಅಂತಲೇ ಕರೆಯುತ್ತೀವಿ, ಬಾಸ್ ಬರ್ತಿದ್ದಾರೆ' ಎಂದು ಹೇಳಿದರೋ ಆಗಲೇ ಬರುತ್ತಿರುವವರು ಖಂಡಿತಾ ತೀರಾ ಸಣ್ಣ ವಯಸ್ಸಿನವರಂತೂ ಖಂಡಿತಾ ಅಲ್ಲವೆಂಬುದು ಖಚಿತವಾಗಿತ್ತು. ಹಾಗಾದರೆ ಅದು ಯಾರು? ರಜನಿಕಾಂತ್ ರವರಾ? ಅವರು ಆಗುವ ಸಾಧ್ಯತೆಯೇ ಹೆಚ್ಚು.
ಚಿತ್ರದ ನಾಯಕ ಅರುಣ್ ಮಾತನಾಡಬೇಕಾದರೆ ತಾವು ಚಿತ್ರದ ಕುರಿತು ಕಲಾವಿದರ ಮಾತುಗಳನ್ನು ಸಂಗ್ರಹಿಸಲು ಹೋದಾಗ ಎಲ್ಲರೂ ತುಂಬಾ ಸಹಕರಿಸಿ ಮಾತನಾಡಿದರು. ಅದರಲ್ಲೂ ಲಿಂಗ ಚಿತ್ರೀಕರಣದಲ್ಲಿದ್ದ ರಜನಿಕಾಂತ್ ಕ್ಯಾರವಾನೊಳಗೆ ನನ್ನನ್ನೊಬ್ಬನನ್ನೇ ಕರೆಸಿಕೊಂಡು ಚಿತ್ರದ ದೃಶ್ಯಗಳನ್ನು ನೋಡಿದರು. ನಾನು ಅವರ ಕಾಲ ಹತ್ತಿರ ಕುಳಿತು ತೋರಿಸುತ್ತಿದ್ದರೆ ಅವರು ಅವರ ಪಕ್ಕದಲ್ಲೇ ಕುಳ್ಳಿರಿಸಿಕೊಂಡು ನೋಡಿ ಪ್ರೋತ್ಸಾಹಿಸಿದರು; ಅದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದರು. ಅದೇ ಜಾಡಿನಲ್ಲಿ ಮುಂದುವರಿದ ಪತ್ರಕರ್ತರು ಹಾಗಾದರೆ ಅವರೇನಾ ಸೀಡಿ ಬಿಡುಗಡೆಗೊಳಿಸೋದು ಎಂದು ಪ್ರಶ್ನಿಸಿದಾಗ ಅವರು 'ದಯವಿಟ್ಟು ಯಾರು ಎಂಬುದನ್ನು ಮೊದಲೇ ರಿವೀಲ್ ಮಾಡೋದು ಬೇಡ' ಎಂದು ಹೇಳಿದ್ದಾರೆಂದು ತಿಳಿಸಿದರು. ಹಾಗೆ ನೋಡಿದರೆ ಬರುವಿಕೆಯನ್ನು ಗುಟ್ಟಾಗಿರಿಸಲು ಬಯಸುವ ಏಕೈಕ ಸ್ಟಾರ್ ರಜನಿಕಾಂತ್ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಮಾತ್ರವಲ್ಲ ಬಾಸ್ ಬರುವುದರಿಂದಾಗಿ ಸೀಡಿ ಬಿಡುಗಡೆಗೆ ನಾವು ದೊಡ್ಡದೊಂದು ಗ್ರೌಂಡನ್ನೇ ಆಯ್ದುಕೊಳ್ಳಬೇಕಾಗಿದ್ದು, ಅದರ ಪರವಾನಗಿ ದೊರೆಯುವ ತನಕ ಸೀಡಿ ಬಿಡುಗಡೆಯ ದಿನಾಂಕ ಮತ್ತು ಸ್ಥಳವನ್ನು ಪ್ರಕಟಿಸುವುದು ಕಷ್ಟ ಎಂದಿದ್ದಾರೆ. ಒಟ್ಟಿನಲ್ಲಿ ಅಲ್ಲಿಯವರೆಗೆ ರಜನಿ ಅಭಿಮಾನಿಗಳ ಎದೆಯಲ್ಲಿ ತೌಡು ಕುಟ್ಟಿದ ಶಬ್ಧಕ್ಕೆ ಕೊರತೆಯಿರುವುದಿಲ್ಲ.
ಮುದ್ದು ಮನಸೇ ಚಿತ್ರದ ಮೂಲಕ ನಿರ್ದೇಶಕ ಅನಂತ್ ಶೈನ್ ಒಂದು ಒಳ್ಳೆಯ ಕಮರ್ಷಿಯಲ್ ಚಿತ್ರ ನೀಡಲು ಸಿದ್ಧವಾಗಿದ್ದಾರೆ. ಪ್ರಥಮದಲ್ಲಿ ಇವರು ನಿರ್ದೇಶಿಸಿದ್ದ ಕಿರುಚಿತ್ರವೊಂದು ಹತ್ತು ಹಲವು ಪ್ರಶಸ್ತಿಗಳನ್ನು ಬಾಚುವ ಮೂಲಕ ಅನಂತ್ ಪ್ರತಿಭಾವಂತನೆಂಬುದನ್ನು ಚಿತ್ರ ಸಾಬೀತುಗೊಳಿಸಿತ್ತು. ಇದೀಗ ಆ್ಯಕ್ಷನ್ ಬೇಸ್ಡ್ ಲವ್ ಸ್ಟೋರಿಯೊಂದಿಗೆ ಬಂದಿರುವ ನಿರ್ದೇಶಕರು ಹಳ್ಳಿ ಮತ್ತು ನಗರದ ಬ್ಯಾಕ್ ಡ್ರಾಪ್ ನಲ್ಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಎರಡೂ ಎರಡು ವಿಭಿನ್ನ ಗೆಟಪ್ ನಲ್ಲಿ ನಾಯಕ ಅರುಣ್ ಕಾಣಿಸಲಿದ್ದಾರೆ. ಹಳ್ಳಿಯ ನಾಯಕಿಯಾಗಿ ನಿತ್ಯಾರಾಮ್ ಮತ್ತು ನಗರದ ನಾಯಕಿಯಾಗಿ ಐಶ್ವರ್ಯಾ ನಾಗ್ ನಟಿಸಿದ್ದಾರೆ. ವಿನೀತ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸ್ನೇಹಿತ ಜೀವನ್ ಜೊತೆ ಸೇರಿಕೊಂಡು ಎಮ್ ಎಮ್ ಎಸ್ ಮೂವೀಸ್ ಸಂಸ್ಥೆ ಕಟ್ಟಿರುವ ಚಿತ್ರದ ನಿರ್ಮಾಪಕರಾದ ಸಂತೋಷ್ ಮತ್ತು ರಮೇಶ್ ಸೇರಿದಂತೆ ತಂಡದ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿರಿದ್ದು ಶುಭಕೋರಿದರು